ವಡೋದರಾ: ಆರೋಗ್ಯ ವಿಮಾ ಕ್ಲೇಮ್ಗೆ ಸಂಬಂಧಿಸಿದಂತೆ ಗ್ರಾಹಕರ ವೇದಿಕೆಯು ಪ್ರಮುಖ ಆದೇಶವೊಂದನ್ನು ಜಾರಿಗೊಳಿಸಿದೆ. ಒಬ್ಬ ವ್ಯಕ್ತಿಯು 24 ಗಂಟೆಗಳಿಗಿಂತ ಕಡಿಮೆ ಕಾಲ ಆಸ್ಪತ್ರೆಗೆ ದಾಖಲಾಗಿದ್ದರೂ ಆರೋಗ್ಯ ವಿಮಾ ಕ್ಲೇಮ್ ಪಡೆಯಬಹುದು ಎಂದು ಆಯೋಗ ಹೇಳಿದೆ. ವಡೋದರದ ನಿವಾಸಿ ರಮೇಶ್ ಚಂದ್ರ ಅವರ ಅರ್ಜಿಯ ಮೇಲೆ ಗ್ರಾಹಕರ ವೇದಿಕೆಯು ಈ ತೀರ್ಪು ನೀಡಿದೆ.
ಹೊಸ ತಂತ್ರಜ್ಞಾನದ ಸಹಾಯದಿಂದ ಕೆಲವೊಮ್ಮೆ ರೋಗಿಗಳಿಗೆ ಕಡಿಮೆ ಸಮಯದಲ್ಲಿ ಅಥವಾ ಆಸ್ಪತ್ರೆಗೆ ದಾಖಲಾಗದೇ ಚಿಕಿತ್ಸೆ ನೀಡುವ ಸಾಧ್ಯತೆಗಳಿವೆ. ಹೀಗಾಗಿ ರೋಗಿಯು 24 ಗಂಟೆಗಳ ಕಾಲ ಆಸ್ಪತ್ರೆಗೆ ದಾಖಲಾಗುವುದು ಅನಿವಾರ್ಯವಲ್ಲ ಎಂದು ಗ್ರಾಹಕರ ಆಯೋಗ ಅಭಿಪ್ರಾಯ ಪಟ್ಟಿದೆ. ಅಲ್ಲದೆ ಅರ್ಜಿದಾರರಿಗೆ ವಿಮಾ ಕ್ಲೇಮ್ ನೀಡುವಂತೆ ವಿಮಾ ಕಂಪನಿಗೆ ಆದೇಶಿಸಿದೆ.
ವಡೋದರಾದ ನಿವಾಸಿ ರಮೇಶ್ ಚಂದ್ರ ಜೋಶಿ ಎಂಬುವರು 2017 ರಲ್ಲಿ ನ್ಯಾಷನಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ವಿರುದ್ಧ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ವಿಮಾ ಕಂಪನಿಯು ತಮಗೆ ಕ್ಲೇಮ್ ನೀಡಲು ನಿರಾಕರಿಸಿದೆ ಎಂದು ಆರೋಪಿಸಿ ಅವರು ಅರ್ಜಿ ಸಲ್ಲಿಸಿದ್ದರು. ಕ್ಲೇಮ್ ವಿವರಗಳ ಬಗ್ಗೆ ನೋಡುವುದಾದರೆ - ಜೋಶಿ ಅವರ ಪತ್ನಿ ಅನಾರೋಗ್ಯದ ಸ್ಥಿತಿಯಲ್ಲಿ ವಡೋದರಾದ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಯ ನಂತರ ಮರುದಿನವೇ ಆಸ್ಪತ್ರೆಯವರು ಅವರನ್ನು ಡಿಸ್ಚಾರ್ಜ್ ಮಾಡಿದರು. ಇದಾದ ನಂತರ ಜೋಶಿ ಅವರು ವಿಮಾ ಕಂಪನಿಗೆ 44,468 ರೂ.ಗಳ ವೈದ್ಯಕೀಯ ಕ್ಲೇಮ್ ಸಲ್ಲಿಸಿದ್ದರು. ಆದರೆ, ವಿಮಾ ಕಂಪನಿ ಅದನ್ನು ತಿರಸ್ಕರಿಸಿತ್ತು.
ನಿಯಮದ ಪ್ರಕಾರ 24 ಗಂಟೆಗಳ ಕಾಲ ರೋಗಿ ಆಸ್ಪತ್ರೆಯಲ್ಲಿ ಇರಲಿಲ್ಲ ಎಂದು ಹೇಳಿ ಕ್ಲೇಮ್ ನೀಡಲು ಕಂಪನಿ ನಿರಾಕರಿಸಿತ್ತು. ಇದಾದ ಬಳಿಕ ಜೋಶಿ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಿದ್ದರು. ತಮ್ಮ ಪತ್ನಿಯನ್ನು ನವೆಂಬರ್ 24, 2016 ರಂದು ಸಂಜೆ 5.38 ಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ಮರುದಿನ ನವೆಂಬರ್ 25 ರಂದು ಸಂಜೆ 6.30 ಕ್ಕೆ ಡಿಸ್ಚಾರ್ಜ್ ಆಗಿದ್ದರು. ಈ ರೀತಿ ಆಕೆ 24 ಗಂಟೆಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿದ್ದರು ಎಂದು ಜೋಶಿ ಅರ್ಜಿಯಲ್ಲಿ ತಿಳಿಸಿದ್ದರು. ವಾದ ವಿವಾದ ಆಲಿಸಿದ ಗ್ರಾಹಕರ ಆಯೋಗ ಜೋಶಿ ಅವರ ಪರವಾಗಿ ತೀರ್ಪು ನೀಡಿದೆ.
ಹಿಂದಿನ ಕಾಲದಲ್ಲಿ ಜನರು ಚಿಕಿತ್ಸೆಗಾಗಿ ದೀರ್ಘಕಾಲ ಆಸ್ಪತ್ರೆಯಲ್ಲಿ ದಾಖಲಾಗುತ್ತಿದ್ದರು. ಆದರೆ ಹೊಸ ತಂತ್ರಜ್ಞಾನ ಬಂದ ನಂತರ ರೋಗಿಗಳನ್ನು ದಾಖಲಿಸಿಕೊಳ್ಳದೇ ಅಥವಾ ಕಡಿಮೆ ಸಮಯದಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗಿಲ್ಲ ಎನ್ನುವ ಒಂದೇ ಕಾರಣದಿಂದ ವಿಮಾ ಕ್ಲೇಮ್ ತಿರಸ್ಕರಿಸುವಂತಿಲ್ಲ. ಕ್ಲೇಮ್ ತಿರಸ್ಕರಿಸಿದ ದಿನದಿಂದ ಶೇ 9 ರ ಬಡ್ಡಿಯೊಂದಿಗೆ ಅರ್ಜಿದಾರ ಜೋಶಿ ಅವರಿಗೆ 44,468 ರೂ.ಗಳನ್ನು ಪಾವತಿಸುವಂತೆ ವಿಮಾ ಕಂಪನಿಗೆ ವೇದಿಕೆ ಆದೇಶಿಸಿದೆ.
ವಿಭಿನ್ನ ರೀತಿಯ ಆರೋಗ್ಯ ವಿಮಾ ಕ್ಲೇಮ್ಗಳು
ನಗದು ರಹಿತ ಕ್ಲೇಮ್ : ಇದರಲ್ಲಿ ವಿಮೆ ನೀಡಿದ ಕಂಪನಿಯು ಎಲ್ಲಾ ವೈದ್ಯಕೀಯ ಬಿಲ್‌ಗಳ ವೆಚ್ಚವನ್ನು ನೇರವಾಗಿ ಆಸ್ಪತ್ರೆಗೆ ಪಾವತಿಸುತ್ತದೆ. ಆದಾಗ್ಯೂ, ನಗದು ರಹಿತ ಆಸ್ಪತ್ರೆಯ ಪ್ರಯೋಜನವನ್ನು ಪಡೆಯಲು ವಿಮಾದಾರನು ನೆಟ್‌ವರ್ಕ್ ಆಸ್ಪತ್ರೆಯಲ್ಲಿ ಮಾತ್ರ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ.
ಮರುಪಾವತಿ ಕ್ಲೇಮ್ : ಪಾಲಿಸಿದಾರರು ಆಸ್ಪತ್ರೆಯ ವೆಚ್ಚವನ್ನು ಡಿಸ್ಚಾರ್ಜ್ ಸಮಯದಲ್ಲಿ ಮುಂಗಡವಾಗಿ ಪಾವತಿಸುತ್ತಾರೆ ಮತ್ತು ನಂತರ ಮರುಪಾವತಿಗಾಗಿ ವಿಮಾ ಕಂಪನಿಗೆ ಬೇಡಿಕೆ ಸಲ್ಲಿಸುತ್ತಾರೆ. ಮರುಪಾವತಿ ಕ್ಲೇಮ್ಗಳನ್ನು ನೆಟ್‌ವರ್ಕ್ ಮತ್ತು ನೆಟ್‌ವರ್ಕ್ ಅಲ್ಲದ ಆಸ್ಪತ್ರೆಗಳಲ್ಲಿ ಕೂಡ ಮಾಡಬಹುದು.
ಇದನ್ನೂ ಓದಿ : ಅಪಘಾತ ಸಂದರ್ಭ ವಾಹನಕ್ಕೆ ವಿಮೆ ಇಲ್ಲದಿದ್ದಲ್ಲಿ ಮಾಲೀಕರೇ ಪರಿಹಾರ ನೀಡಬೇಕು: ಹೈಕೋರ್ಟ್