ನವದೆಹಲಿ: ಅಮೆರಿಕ ಮತ್ತು ಚೀನಾ ನಡುವಿನ ವಾಣಿಜ್ಯ ಸಮರ ಹಾಗೂ ನಿಧಾನಗತಿಯ ಜಾಗತಿಕ ಆರ್ಥಿಕತೆಯಿಂದಾಗಿ ತೈಲದ ಬೇಡಿಕೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಇಂಧನ ಎಜೆನ್ಸಿ (ಐಇಎ) ತಿಳಿಸಿದೆ.
ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಇಂಧನ ನೀತಿಗಳ ಕುರಿತು ಸಲಹೆ ನೀಡುವ ಪ್ಯಾರಿಸ್ ಮೂಲದ ಐಇಎ, ಪ್ರಸಕ್ತ ವರ್ಷದ ತೈಲ ಬೇಡಿಕೆಯ ಬೆಳವಣಿಗೆಯ ಮುನ್ಸೂಚನೆ ನೀಡಿದೆ. ಭವಿಷ್ಯದಲ್ಲಿ ನಿತ್ಯ 0.1 ಮಿಲಿಯನ್ ಬ್ಯಾರಲ್‌ಗಳಿಂದ ಕ್ರಮವಾಗಿ 1.1 ಮಿಲಿಯನ್ ಬ್ಯಾರಲ್ ಮತ್ತು 1.3 ಮಿಲಿಯನ್ ಬ್ಯಾರೆಲ್‌ಗಳಿಗೆ ಕಡಿತಗೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ.
ರಾಷ್ಟ್ರ- ರಾಷ್ಟ್ರಗಳ ನಡುವಿನ ವ್ಯಾಪಾರ ಸಮರ ಜಾಗತಿಕ ಬೆಳವಣಿಗೆಯ ಕುಸಿತಕ್ಕೆ ಮೂಲ ಕಾರಣವಾಗಿ ವಾಣಿಜ್ಯ- ವಹಿವಾಟನ್ನು ಇನ್ನಷ್ಟು ಹದಗೆಡಿಸುತ್ತಿದೆ. ಜೊತೆಗೆ ನಿತ್ಯದ ಇಂಧನ ಮೂಲಗಳ ಬೇಡಿಕೆಯನ್ನು ಕಡಿಮೆಗೊಳಿಸಿದೆ ಎಂದು ಐಇಎ ಆತಂಕ ವ್ಯಕ್ತಪಡಿಸಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಕಚ್ಚಾ ತೈಲ ಬೆಲೆ ಕುಸಿತವು ಜನವರಿಯಿಂದ ಪ್ರತಿ ಬ್ಯಾರಲ್ 57 ಡಾಲರ್‌ಗಿಂತಲೂ ಕಡಿಮೆಯಾಗಿದೆ. ಕೆಲವು ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ನಡೆಸಿದ ಪರ್ಷಿಯನ್ ಕೊಲ್ಲಿಯಲ್ಲಿನ ಉದ್ವಿಗ್ನತೆಯ ಈಗಿನ ಆತಂಕಗಳನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಐಇಎ ಹೇಳಿದೆ.
ಭಾರತದಲ್ಲಿ ಅಲ್ಪ ದರ ಕುಸಿದ ಪೆಟ್ರೋಲ್, ಡೀಸೆಲ್
ದೇಶದ ಪ್ರಮುಖ ನಗರಗಳಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಶುಕ್ರವಾರ (ಆಗಸ್ಟ್ 9) ಸತತ ಎರಡನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ನ ಚಿಲ್ಲರೆ ದರವನ್ನು ಕಡಿಮೆಗೊಳಿಸಿವೆ.
ಇಂದಿನ ದರ ಪರಿಷ್ಕರಣೆಯ ನಂತರ ಪ್ರತಿ ಲೀ. ಪೆಟ್ರೋಲ್ 14-16ರಿಂದ ಪೈಸೆ ಅಗ್ಗವಾದರೆ, ಡೀಸೆಲ್ನಲ್ಲಿ ಪ್ರತಿ ಲೀ. 7-13 ಪೈಸೆ ಕಡಿಮೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಗುರುವಾರ 72.23 ರೂ.ಗೆ ಹೋಲಿಸಿದರೆ ಇಂದು 72.08 ರೂ.ಗೆ ಇಳಿದಿದ್ದರೆ, ಡೀಸೆಲ್ ಬೆಲೆ ಲೀ.ಗೆ 65.75 ರೂ.ಗೆ ಇಳಿದಿದ್ದು, ಗುರುವಾರ 65.88 ರೂ.ಯಲ್ಲಿ ಮಾರಾಟ ಆಗುತ್ತಿತ್ತು.
ಮುಂಬೈ, ಚೆನ್ನೈ, ಕೋಲ್ಕತ್ತಾ ಮತ್ತು ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಕ್ರಮವಾಗಿ ₹ 77.74 & ₹ 68.94, ₹ 74.87 & ₹ 69.59, ₹ 74.78 & 68.08 ಹಾಗೂ ₹ 74.51 & $ 67.96ರಲ್ಲಿ ಮಾರಾಟ ಆಗುತ್ತಿದೆ.