ನವದೆಹಲಿ: ದೇಶದ ಪ್ರಮುಖ ನಗರ ಮಾರುಕಟ್ಟೆಗಳಲ್ಲಿ ಟೊಮೇಟೊ ಬೆಲೆ ದಿಢೀರ್ ಕುಸಿತ ಕಂಡಿದ್ದು, ಸದ್ಯ ಕೇಳಿ ಬರುತ್ತಿರುವ ಈ ಬೆಲೆ ರೈತರನ್ನು ಕಂಗೆಡಿಸಿದೆ. ಇಷ್ಟೊಂದು ಕಡಿಮೆ ದರಕ್ಕೆ ಮಾರುವ ಬದಲು ಬೀದಿಗೆ ಎಸೆಯುವುದೇ ಲೇಸು ಎಂದು ರೈತರು ಸಂಕಟ ವ್ಯಕ್ತಪಡಿಸಲು ಆರಂಭಿಸಿದ್ದಾರೆ.
ದೆಹಲಿ, ಬೆಂಗಳೂರು ಮತ್ತು ಹೈದರಾಬಾದ್‌ನ ಮಾರುಕಟ್ಟೆ ಕೇಂದ್ರಗಳಲ್ಲಿ ಟೊಮೇಟೊ ಬೆಲೆ ಮೂರು ವರ್ಷಗಳ ಕನಿಷ್ಠ ಮಟ್ಟಕ್ಕಿಂತ ಕಡಿಮೆಯಾಗಿದೆ. ಸಗಟು ಮಾರುಕಟ್ಟೆಗಳಲ್ಲಿ ಹೆಚ್ಚು ಆವಕ ಆಗಿದ್ದರಿಂದ ಶುಕ್ರವಾರ ಕೆ.ಜಿ.ಗೆ 4-10 ರೂ.ಯಲ್ಲಿ ಮಾರಾಟ ಆಗುತ್ತಿದೆ.
ರಾಷ್ಟ್ರ ರಾಜಧಾನಿಯ ಆಜಾದ್‌ಪುರ ಸಗಟು ಮಂಡಿಯಲ್ಲಿ ಕಳೆದ ವರ್ಷ ಮೇ 22ರಂದು ಪ್ರತಿ ಕೆ.ಜಿ.ಗೆ 14.30 ರೂ. ಬೆಲೆ ಇತ್ತು. ಆದರೆ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಪ್ರತಿ ಕೆ.ಜಿ.ಗೆ 30 ರೂ.ಯಷ್ಟಿತ್ತು. ಕೋವಿಡ್-19 ಬಿಕ್ಕಟ್ಟಿನಲ್ಲಿ ನಿಧಾನಗತಿಯ ಬೇಡಿಕೆ ಮತ್ತು ತ್ವರಿತ ಹಾಳಾಗುವ ಸರಕುಗಳ ಸುಗಮ ಸಾಗಣೆ ಕೊರತೆಯ ಮಧ್ಯೆ ಟೊಮೇಟೊ ಬೆಲೆ ತೀವ್ರವಾಗಿ ಕುಸಿದಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಆಹಾರ ಸಂಸ್ಕರಣಾ ಸಚಿವಾಲಯವು ನಿರ್ವಹಿಸುತ್ತಿರುವ ಮಾಹಿತಿಯ ಪ್ರಕಾರ, "ಆಜಾದ್ಪುರದಲ್ಲಿನ ಪ್ರಸ್ತುತ ಬೆಲೆಗಳು ಕಳೆದ ವರ್ಷದ ಕ್ವಿಂಟಾಲ್ಗೆ 1,258 ರೂ. ದರಕ್ಕೆ ಹೋಲಿಸಿದರೆ, ಈಗ 440 ರೂ.ಯಷ್ಟಿದೆ. ದೆಹಲಿ, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನದಿಂದ ಟೊಮೇಟೊ ಬೆಳೆ ಹೆಚ್ಚು ಆವಕ ಆಗುತ್ತಿದೆ ಎಂದು ಹೇಳಿದೆ.
ಹೈದರಾಬಾದ್‌ನ ಬೋವೆನ್‌ಪಲ್ಲಿ ಸಗಟು ಮಾರುಕಟ್ಟೆಯಲ್ಲಿ ಟೊಮೇಟೊ ಬೆಲೆ ಶುಕ್ರವಾರ ಪ್ರತಿ ಕೆ.ಜಿ.ಗೆ 5 ರೂ. ಮಾರಾಟ ಆಗುತ್ತಿದೆ. ಬೆಂಗಳೂರು ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ 10 ರೂ. ಇದ್ದಪು, ಹಿಂದಿನ ವರ್ಷದ ಇದೇ ಅವಧಿಯಲ್ಲಿ ಪ್ರತಿ ಕೆ.ಜಿ.ಗೆ 30 ರೂ.ಯಷ್ಟಿತ್ತು.