ಮೆಲ್ಬೋರ್ನ್: ಟೀಂ ಇಂಡಿಯಾದ ಅಭಿಮಾನಿ ನವಲ್ದೀಪ್ ಸಿಂಗ್ ಅವರು ಮೆಲ್ಬೋರ್ನ್‌ನ ರೆಸ್ಟೋರೆಂಟ್‌ವೊಂದರಲ್ಲಿ ತನ್ನ ನೆಚ್ಚಿನ ಕ್ರಿಕೆಟಿಗರ 6,600 ರೂ. (118.69) ಮೌಲ್ಯದ ರೆಸ್ಟೋರೆಂಟ್ ಬಿಲ್ ಪಾವತಿಸಿದ್ದಾರೆ.
ಸಿಂಗ್ ಅವರು ತಮ್ಮ ನೆಚ್ಚಿನ ಕ್ರಿಕೆಟಿಗರಾದ ರಿಷಭ್ ಪಂತ್, ಶುಬ್ಮನ್ ಗಿಲ್, ರೋಹಿತ್ ಶರ್ಮಾ ಮತ್ತು ನವದೀಪ್ ಸೈನಿ ಅವರನ್ನು ರೆಸ್ಟೋರೆಂಟ್ನಲ್ಲಿ ಕಂಡು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ರೆಸ್ಟೋರೆಂಟ್ ಬಿಲ್ ಪಾವತಿಸಿದ್ದನ್ನು ಅರಿತ ರೋಹಿತ್ ಶರ್ಮಾ, ಪಾವತಿಸಿದ ಹಣ ಹಿಂಪಡೆಯುವಂತೆ ಅಭಿಮಾನಿಗೆ ಕೋರಿದರು. ಆದರೆ, ಆತ ಗೌರವಯುತವಾಗಿ ತಿರಸ್ಕರಿಸಿದ.
ಅವರಿಗೆ ತಿಳಿಯದಂತೆ ನಾನು ಅವರ ಟೇಬಲ್ ಬಿಲ್ ಪಾವತಿಸಿದ್ದೆ. ನನ್ನ ಸೂಪರ್ ಸ್ಟಾರ್ಗಳಿಗಾಗಿ ನಾನು ಇದನ್ನು ಮಾಡಬಲ್ಲೆ. ನಾನು ಬಿಲ್ ಪಾವತಿಸಿದ್ದೇನೆ ಎಂದು ಅವರಿಗೆ ತಿಳಿದಾಗ, 'ದಯವಿಟ್ಟು ಹಣ ತೆಗೆದುಕೊಳ್ಳಿ. ಇದು ಸರಿಯಲ್ಲ' ಎಂದು ರೋಹಿತ್ ಶರ್ಮಾ ಕೇಳಿಕೊಂಡರು. ನಾನು ಪರವಾಗಿಲ್ಲ ಬಿಡಿ ಸರ್ ಅಂದೆ. ರಿಷಬ್ ಪಂತ್ ಬಂದು ತಬ್ಬಿಕೊಂಡರು. 'ಹಣ ತೆಗೆದುಕೊಂಡರೆ ಮಾತ್ರವೇ ನಿನ್ನೊಂದಿಗೆ ಫೋಟೋ ತೆಗೆದುಕೊಳ್ಳುತ್ತೇವೆ' ಎಂದರು. ನಾನು ಬೇಡ, ಪರವಾಗಿಲ್ಲ ಎಂದಿದ್ದಾಗಿ ಸಿಂಗ್ ಅವರು ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಬರೆದುಕೊಂಡಿದ್ದಾರೆ.
ಈ ಘಟನೆಯ ನಡೆದ ಬಳಿಕ ಕೋವಿಡ್ ಮಾರ್ಗಸೂಚಿಗಳು ಉಲ್ಲಂಘನೆ ಆಗಿದೆ ಎಂಬ ಮಾತುಗಳು ಕೇಳಿಬಂದ ಬಳಿಕ ಬಿಸಿಸಿಐ ತನ್ನ ಸ್ಪಷ್ಟನೆ ನೀಡಿದೆ. ಭಾರತೀಯ ಕ್ರಿಕೆಟಿಗರು ಮೆಲ್ಬೋರ್ನ್ನಲ್ಲಿ ಯಾವುದೇ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ. ಮಾಸ್ಕ್ ಸಹ ಧರಿಸಿದ್ದರು ಎಂದು ಹೇಳಿದೆ.