ನ್ಯೂಯಾರ್ಕ್: ಕಳೆದ 6 ದಿನಗಳಿಂದ ಉಕ್ರೇನ್ ಮೇಲೆ ದಾಳಿ ಮಾಡುತ್ತಿದ್ದ ರಷ್ಯಾ ತನ್ನ ಆಕ್ರಮಣಕಾರಿಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಭೀಕರ ಯುದ್ಧದ ಪರಿಸ್ಥಿತಿ ಜಗತ್ತಿಗೆ ಭಾರಿ ಹೊಡೆತ ನೀಡುತ್ತಿದೆ.
ಯುದ್ಧದಿಂದಾಗಿ ಅಮೆರಿಕ ಸೇರಿದಂತೆ ವಿವಿಧ ದೇಶಗಳ ಷೇರು ಮಾರುಕಟ್ಟೆಗಳಲ್ಲಿ ಮಹಾ ಕುಸಿತ ಉಂಟಾಗಿದ್ದರೆ, ಬ್ಯಾರಲ್ ಕಚ್ಚಾ ತೈಲ ಬೆಲೆ 100 ಡಾಲರ್ ಗಡಿ ದಾಟಿದೆ. ಸದ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 110 ಡಾಲರ್‌ಗೆ ಏರಿಕೆಯಾಗಿದೆ. ಇದರಿಂದಾಗಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ರಷ್ಯಾ ವಿಶ್ವದ ಅತಿದೊಡ್ಡ ಇಂಧನ ಉತ್ಪಾದಕ ದೇಶಗಳಲ್ಲಿ ಒಂದಾಗಿದೆ.
ಜಾಗತಿಕ ಆರ್ಥಿಕತೆಯ ಮೇಲೆ ರಷ್ಯಾ-ಉಕ್ರೇನ್ ಯುದ್ಧ ಪರಿಣಾಮ ಬೀರಿದೆ. ಹೀಗಾಗಿ ಷೇರುದಾರರು ಮಾರುಕಟ್ಟೆಯಲ್ಲಿ ತಮ್ಮ ಹೂಡಿಕೆ ಹಿಂತೆಗೆದುಕೊಳ್ಳಲು ಮುಂದಾಗಿರುವುದೇ ಷೇರುಪೇಟೆಗಳಲ್ಲಿ ರೆಡ್ ಸಿಗ್ನಲ್‌ಗೆ ಕಾರಣವಾಗಿದೆ.
ಡೌ ಜೋನ್ಸ್ 576 ಪಾಯಿಂಟ್‌ಗಳ ಕುಸಿದ ಬಳಿಕ 33,316ಕ್ಕೆ ತಲುಪಿದರೆ, ನಾಸ್ಡಾಕ್ ಶೇ.1.5ರಷ್ಟು ನಷ್ಟ ಅನುಭವಿಸಿತು. S&P 500 ಅಂಕಗಳನ್ನು ಕಳೆದುಕೊಂಡಿದೆ. ತೈಲ, ಕೃಷಿ ಸರಕುಗಳು, ಸರ್ಕಾರಿ ಬಾಂಡ್‌ಗಳ ಮಾರುಕಟ್ಟೆಗಳಲ್ಲಿ ದೊಡ್ಡ ಚಲನೆ ಉಂಟಾಗಿದೆ.
ಅಮೆರಿಕದಲ್ಲಿ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಶೇ.8ರಷ್ಟು ಏರಿಕೆಯೊಂದಿಗೆ 103.41 ಡಾಲರ್‌ಗೆ ಜಿಗಿದಿದೆ. ಇದು 2014ರ ನಂತರ ಹೆಚ್ಚಿನ ಬೆಲೆಯ ದಾಖಲೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗುಣಮಟ್ಟದ ಕಚ್ಚಾ ತೈಲವು ಬ್ಯಾರನ್‌ಗೆ ಶೇ.7.1ರಷ್ಟು ಹೆಚ್ಚಳಗೊಂಡು 104.97 ಡಾಲರ್‌ಗೆ ತಲುಪಿದೆ.
ಗೋಧಿ, ಜೋಳದ ಬೆಳೆ ಗಗನಕ್ಕೆ.. ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವು ಕೃಷಿ ಸರಕುಗಳ ಬೆಲೆಗಳಲ್ಲಿ ಏರಿಕೆಗೂ ಕಾರಣವಾಗಿದೆ. ಇದು ಈಗಾಗಲೇ ಏರುತ್ತಿರುವ ಹಣದುಬ್ಬರದ ಜೊತೆಗೆ ಭಾರಿ ಹೊಡೆತ ನೀಡಿದಂತಾಗಿದೆ. ಗೋಧಿ ಮತ್ತು ಜೋಳದ ಬೆಲೆಗಳು ಪ್ರತಿ ಬುಶೆಲ್‌ಗೆ ಶೇ.5ಕ್ಕಿಂತ (1 ಬುಶೆಲ್‌ಗೆ 25.4 ಕೆಜಿ) ಹೆಚ್ಚಿದೆ. ಈ ವರ್ಷ ಒಟ್ಟಾರೆಯಾಗಿ ಶೇ.20ರಷ್ಟು ಹೆಚ್ಚಿದೆ. ಉಕ್ರೇನ್ ಈ ಎರಡೂ ಬೆಳೆಗಳನ್ನು ಪ್ರಮುಖವಾಗಿ ರಫ್ತು ಮಾಡುವ ದೇಶವಾಗಿದೆ.
ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ಯುದ್ಧದ ತಲ್ಲಣ; ಷೇರುಪೇಟೆಯಲ್ಲಿ ಸೆನ್ಸೆಕ್ಸ್ 900 ಅಂಕಗಳ ಭಾರಿ ಕುಸಿತ