ಮುಂಬೈ: ಮುಂಬೈ ಷೇರುಪೇಟೆಯಲ್ಲಿ ಕರಡಿ ಕುಣಿತ ಮುಂದುವರಿದಿದ್ದು, ದಿನದ ಆರಂಭದ ವಹಿವಾಟಿನಲ್ಲಿ ಸೆನ್ಸೆಕ್ಸ್ 300 ಅಂಕಗಳ ಕುಸಿತದೊಂದಿಗೆ 60,837ರಲ್ಲಿ ವಾಟಿವಾಟು ನಡೆಸುತ್ತಿದೆ. ನಿಫ್ಟಿ 89 ಅಂಕಗಳ ನಷ್ಟದ ಬಳಿಕ 18,121ಕ್ಕೆ ತಲುಪಿತ್ತು.
ವಿದೇಶಿ ನಿಧಿ ಹೊರ ಹರಿಯುವಿಕೆ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣಗಳ ಪರಿಣಾಮವಾಗಿ ಐಸಿಐಸಿಐ, ಟಾಟಾ ಸ್ಟೀಲ್, ಹೆಚ್‌ಡಿಎಫ್‌ಸಿ ಹಾಗೂ ಇನ್ಫೋಸಿಸ್ ಷೇರುಗಳು ನಷ್ಟ ಅನುಭವಿಸಿದ ಪ್ರಮುಖ ಸಂಸ್ಥೆಗಳಾಗಿವೆ.
ಅತಿ ಹೆಚ್ಚು ನಷ್ಟ ಹೊಂದಿದ ಅಗ್ರಸ್ಥಾನದಲ್ಲಿ ಐಸಿಐಸಿಐ ಬ್ಯಾಂಕ್ ಇದೆ. ಸುಮಾರು 2 ಪ್ರತಿಶತದಷ್ಟು ಈ ಬ್ಯಾಂಕ್ ಷೇರುಗಳು ಕುಸಿದಿವೆ. ನಂತರದ ಸ್ಥಾನದಲ್ಲಿ ಟಾಟಾ ಸ್ಟೀಲ್, ಐಟಿಸಿ, ಎಸ್‌ಬಿಐ, ಹೆಚ್‌ಡಿಎಫ್‌ಸಿ ಹಾಗೂ ಟೈಟಾನ್ ಇದೆ. ಮತ್ತೊಂದೆಡೆ, ಇಂಡಸ್‌ಇಂಡ್ ಬ್ಯಾಂಕ್, ಎಲ್ & ಟಿ, ಬಜಾಜ್ ಆಟೋ ಮತ್ತು ಬಜಾಜ್ ಫೈನಾನ್ಸ್ ಷೇರುಗಳು ಲಾಭ ಗಳಿಸಿದವು.
ನಿನ್ನೆ ದಿನದಾಂತ್ಯಕ್ಕೆ ಸೆನ್ಸೆಕ್ಸ್ 206.93 ಅಂಕಗಳ ಕುಸಿತದೊಂದಿಗೆ 61,143ರಲ್ಲಿ ಕೊನೆಗೊಂಡಿತು. ನಿಫ್ಟಿ 57.45 ಕಳೆದುಕೊಂಡು 18,210.95 ಕ್ಕೆ ತಲುಪಿತ್ತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಮಾರಾಟಗಾರರಾಗಿದ್ದು, ವಿನಿಮಯ ಮಾಹಿತಿಯ ಪ್ರಕಾರ ನಿನ್ನೆ 1,913.36 ಕೋಟಿ ಮೌಲ್ಯದ ಷೇರುಗಳನ್ನು ಆಫ್‌ಲೋಡ್ ಮಾಡಿದ್ದಾರೆ.
ಏಷ್ಯಾದ ಇತರೆ ಷೇರು ಮಾರುಕಟ್ಟೆಗಳಾದ ಶಾಂಘೈ, ಹಾಂಗ್‌ಕಾಂಗ್ ಮತ್ತು ಟೋಕಿಯೊದಲ್ಲಿನ ಷೇರುಗಳು ಮಿಡ್-ಸೆಶನ್ ಡೀಲ್‌ಗಳಲ್ಲಿ ನಷ್ಟದೊಂದಿಗೆ ವಹಿವಾಟು ನಡೆಸುತ್ತಿದ್ದರೆ ಸಿಯೋಲ್ ಷೇರುಪೇಟೆ ಲಾಭದಲ್ಲಿತ್ತು. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 2.25 ಪ್ರತಿಶತದಷ್ಟು ಕುಸಿತದೊಂದಿಗೆ 81.98 ಡಾಲರ್‌ಗೆ ತಲುಪಿದೆ.