ಮುಂಬೈ : ಜಗತ್ತಿನಾದ್ಯಂತ ಕೋವಿಡ್ ರೂಪಾಂತರಿ ಒಮಿಕ್ರಾನ್ ತಲ್ಲಣ ಮೂಡಿಸಿರುವುದು ಜಾಗತಿಕ ಷೇರು ಮಾರುಕಟ್ಟೆಯಲ್ಲಿ ನಕಾರಾತ್ಮಕ ಪ್ರತಿಕ್ರಿಯೆಗೆ ಕಾರಣವಾಗಿದೆ. ಇದು ಮುಂಬೈ ಷೇರುಪೇಟೆ ಮೇಲೂ ಪರಿಣಾಮ ಬೀರಿದೆ.
ದಿನದ ಆರಂಭದಲ್ಲೇ ಸೆನ್ಸೆಕ್ಸ್ 300 ಅಂಕಗಳ ನಷ್ಟದೊಂದಿಗೆ 57,581ರಲ್ಲಿ ವಹಿವಾಟು ಆರಂಭಿಸಿದೆ. ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 91 ಅಂಕಗಳ ಕುಸಿತದ ಬಳಿಕ 17,157ರಲ್ಲಿತ್ತು. ರಿಲಯನ್ಸ್ ಇಂಡಸ್ಟ್ರೀಸ್, ಟೈಟಾನ್, ಎಚ್‌ಡಿಎಫ್‌ಸಿ, ಎಂ&ಎಂ, ಹೆಚ್‌ಯುಎಲ್, ಮಾರುತಿ, ಏಷ್ಯನ್ ಪೇಂಟ್ಸ್ ಹಾಗೂ ಇಂಡಸ್‌ಇಂಡ್ ಬ್ಯಾಂಕ್ ಹಾಗೂ ಕೋಟಕ್ ಬ್ಯಾಂಕ್‌ಗಳ ಷೇರುಗಳು ನಷ್ಟ ಅನುಭವಿಸಿವೆ.
ಟೈಟಾನ್ ಶೇ.3 ರಷ್ಟು ನಷ್ಟ ಅನುಭವಿಸಿದ ಅಗ್ರ ಕಂಪನಿಯಾಗಿದೆ. ಮತ್ತೊಂದೆಡೆ, ಇನ್ಫೋಸಿಸ್, ಟಿಸಿಎಸ್, ಹೆಚ್‌ಸಿಎಲ್ ಟೆಕ್ ಮತ್ತು ಟೆಕ್ ಮಹೀಂದ್ರಾ ಲಾಭ ಗಳಿಸಿದವು. ನಿನ್ನೆ ಒಂದೇ ದಿನ ವಿದೇಶಿ ಹೂಡಿಕೆದಾರರು 1,468.71 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಸ್ಟಾಕ್ ಎಕ್ಸ್‌ಚೇಂಜ್ ಮಾಹಿತಿ ನೀಡಿದೆ.
ಏಷ್ಯಾದ ಇತರೆ ಮಾರುಕಟ್ಟೆಗಳಾದ ಶಾಂಘೈ, ಹಾಂಗ್ ಕಾಂಗ್, ಟೋಕಿಯೊ ಮತ್ತು ಸಿಯೋಲ್‌ನಲ್ಲಿನ ಷೇರುಗಳು ಮಿಡ್-ಸೆಷನ್‌ನಲ್ಲಿ ನಷ್ಟದೊಂದಿಗೆ ವಹಿವಾಟು ನಡೆಸುತ್ತಿವೆ. ಅಂತಾರಾಷ್ಟ್ರೀಯ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಶೇ.0.79ರಷ್ಟು ಕಡಿಮೆಯಾಗಿ 74.43 ಡಾಲರ್‌ಗೆ ಇಳಿಕೆ ಕಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಆರಂಭದಲ್ಲೇ ಡಾಲರ್ ಎದುರು ರೂಪಾಯಿ ಮೌಲ್ಯ 14 ಪೈಸೆ ಕುಸಿತ ಕಂಡು 76.23ರೂಪಾಯಿಯಲ್ಲಿ ವ್ಯವಹಾರ ಮಾಡುತ್ತಿದೆ.
ಇದನ್ನೂ ಓದಿ: ಖಾಸಗೀಕರಣ ವಿರೋಧಿಸಿ ಎರಡು ದಿನಗಳ ಮುಷ್ಕರ: ದೇಶಾದ್ಯಂತ ಬ್ಯಾಂಕ್ ಸೇವೆಗಳು ಬಂದ್