ಮುಂಬೈ : ಕೋವಿಡ್ ವೈರಸ್‌ನ ರೂಪಾಂತರಿಯ ಒಮಿಕ್ರಾನ್ ಮೊದಲ ಪ್ರಕರಣ ದೇಶದಲ್ಲಿ ವರದಿಯಾದ ಬೆನ್ನಲ್ಲೇ ಎರಡು ದಿನಗಳಿಂದ ಚೇತರಿಕೆಯ ಹಾದಿಯಲ್ಲಿದ್ದ ಮುಂಬೈ ಷೇರುಪೇಟೆಯಲ್ಲಿ ಕರಡಿ ಕುಣಿತವಾಗಿದೆ.
ವಾರಾಂತ್ಯದಲ್ಲಿ ಸೆನ್ಸೆಕ್ಸ್ 764 ಅಂಕಗಳ ಕುಸಿತದೊಂದಿಗೆ 57,696.46ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 204 ಅಂಕಗಳ ಪತನವಾಗಿ 17,196ರಲ್ಲಿ ಕೊನೆಗೊಂಡಿದೆ.
ಪವರ್‌ಗ್ರಿಡ್ ಟಾಪ್ ಹೆಚ್ಚು ನಷ್ಟವನ್ನು ಅನುಭವಿಸಿದ ಅಗ್ರ ಕಂಪನಿಯಾಗಿದೆ. ಪವರ್‌ಗ್ರಿಡ್‌ನ ಷೇರುಗಳ ಮೌಲ್ಯ ಶೇ.4ರಷ್ಟು ಕುಸಿದಿದೆ. ನಂತರದ ಸ್ಥಾನದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್, ಏಷ್ಯನ್ ಪೇಂಟ್ಸ್, ಕೋಟಕ್ ಬ್ಯಾಂಕ್, ಟೆಕ್ ಮಹೀಂದ್ರಾ ಹಾಗೂ ಭಾರ್ತಿ ಏರ್‌ಟೆಲ್ ಇದೆ.
ಮತ್ತೊಂದೆಡೆ, ಎಲ್&ಟಿ, ಇಂಡಸ್‌ಇಂಡ್ ಬ್ಯಾಂಕ್, ಟಾಟಾ ಸ್ಟೀಲ್ ಹಾಗೂ ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳು ಲಾಭ ಗಳಿಸಿದವು. ಒಮಿಕ್ರಾನ್ ಸುತ್ತಲಿನ ಅನಿಶ್ಚಿತತೆಯ ಬಗ್ಗೆ ವ್ಯಾಪಾರಿಗಳು ಚಿಂತಾಕ್ರಾಂತರಾಗಿದ್ದಾರೆ ಎಂದು 'ಕ್ಯಾಪಿಟಲ್ವಿಯಾ ಗ್ಲೋಬಲ್ ರಿಸರ್ಚ್'ನ ಸಂಶೋಧನಾ ಮುಖ್ಯಸ್ಥ ಗೌರವ್ ಗಾರ್ಗ್ ಅಭಿಪ್ರಾಯಪಟ್ಟಿದ್ದಾರೆ.
ಏಷ್ಯಾದ ಇತರೆ ಷೇರುಪೇಟೆಗಳಾದ ಶಾಂಘೈ, ಸಿಯೋಲ್ ಹಾಗೂ ಟೋಕಿಯೋದಲ್ಲಿ ಷೇರುಗಳು ಲಾಭದೊಂದಿಗೆ ಕೊನೆಗೊಂಡರೆ, ಹಾಂಗ್‌ಕಾಂಗ್ ಕುಸಿತು ಕಂಡಿದೆ. ಅಂತಾರಾಷ್ಟ್ರೀಯ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 2.38 ರಷ್ಟು ಏರಿಕೆಯಾಗಿ 71.32 ಡಾಲರ್‌ನಲ್ಲಿ ಮಾರಾಟ ಆಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 10 ಪೈಸೆ ಕುಸಿತ ಕಂಡು 75.12ರಲ್ಲಿ ವ್ಯವಹಾರ ನಡೆಸಿದೆ.
ಕರ್ನಾಟಕದಲ್ಲಿ ಎರಡು ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಸರ್ಕಾರ ನಿನ್ನೆ ತಿಳಿಸಿತ್ತು. ದಕ್ಷಿಣ ಆಫ್ರಿಕಾದಿಂದ ಬಂದಿದ್ದ 66 ವರ್ಷದ ಹಾಗೂ 46 ವರ್ಷದ ಇಬ್ಬರು ವ್ಯಕ್ತಿಗಳಲ್ಲಿ ಸೋಂಕು ಪತ್ತೆಯಾಗಿದೆ ಎಂದು ಅಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದರು.
ಇದನ್ನೂ ಓದಿ: 'ಸಾವರಿನ್ ಗೋಲ್ಡ್ ಬಾಂಡ್'ಗಳು ಈಗ ಆರ್ಬಿಐನಲ್ಲೂ ಲಭ್ಯ.. ರಿಟೇಲ್ ಡೈರೆಕ್ಟ್ ಪೋರ್ಟಲ್ ಚೆಕ್ ಮಾಡಿ