ಮುಂಬೈ: ಉಕ್ರೇನ್ ಮೇಲೆ ರಷ್ಯಾ ಯುದ್ಧದ ಪರಿಸ್ಥಿತಿ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಾಗತಿಕ ಷೇರು ಮಾರುಕಟ್ಟೆಗಳು ಸಕಾರಾತ್ಮಕ ವಹಿವಾಟು ಹಾಗೂ ದೇಶದ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದಿಂದ ಮುಂಬೈ ಷೇರು ಪೇಟೆಯಲ್ಲಿ ಸೆನ್ಸೆಕ್ಸ್ ದಿನದ ಆರಂಭದಲ್ಲೇ 1,595 ಅಂಕಗಳ ಭಾರಿ ಏರಿಕೆ ನಂತರ 56,242ಕ್ಕೆ ತಲುಪಿದೆ.
ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 411.95 ಅಂಶಗಳನ್ನು ಹೆಚ್ಚಿಸಿಕೊಂಡು 16,757ರಲ್ಲಿ ವಹಿವಾಟು ನಡೆಸುತ್ತಿದೆ. ಆರಂಭಿಕ ವಹಿವಾಟಿನಲ್ಲಿ ಆಕ್ಸಿಸ್ ಬ್ಯಾಂಕ್, ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಮಾರುತಿ ಸುಜುಕಿ ಹಾಗೂ ಹಿಂದೂಸ್ತಾನ್ ಯೂನಿಲಿವರ್ ಷೇರುಗಳು ಶೇ. 4.85 ರಷ್ಟು ಏರಿಕೆ ಕಂಡವು. ಆದರೆ ಟಾಟಾ ಸ್ಟೀಲ್ ನಷ್ಟದಲ್ಲಿ ಸಾಗಿತ್ತು.
ಏಷ್ಯಾದ ಇತರೆ ಷೇರುಪೇಟೆಗಳಾದ ಹಾಂಗ್ ಕಾಂಗ್, ಟೋಕಿಯೋ ಮತ್ತು ಶಾಂಘೈನಲ್ಲಿನ ಷೇರುಗಳು ಮಧ್ಯ-ಸೆಶನ್ ಡೀಲ್‌ಗಳಲ್ಲಿ ಹಸಿರು ಬಣ್ಣದಲ್ಲಿ ಇದ್ದವು. ಅಮೆರಿಕ ಷೇರು ವಿನಿಮಯ ಕೇಂದ್ರಗಳು ಬುಧವಾರ ಗಮನಾರ್ಹ ಲಾಭದೊಂದಿಗೆ ಸಾಗಿವೆ.
ಅಂತಾರಾಷ್ಟ್ರೀಯ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಶೇಕಡಾ 1.66 ರಷ್ಟು ಏರಿಕೆಯಾಗಿ ಬ್ಯಾರೆಲ್‌ಗೆ 113 ಡಾಲರ್‌ಗೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದಿನದ ಆರಂಭದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 42 ಪೈಸೆ ಹೆಚ್ಚಿಸಿಕೊಂಡು 76.20 ರೂಪಾಯಿಯಲ್ಲಿ ವಹಿವಾಟು ನಡೆಸುತ್ತಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ನಿನ್ನೆ ನಿವ್ವಳ ಆಧಾರದ ಮೇಲೆ 4,818.71 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಉತ್ತರ ಪ್ರದೇಶ ಚುನಾವಣೆಯ ಫಲಿತಾಂಶ ಷೇರು ಮಾರುಕಟ್ಟೆ ಮೇಲೂ ಪರಿಹಾರ ಬೀರಿದೆ. ಯಾಕೆಂದರೆ ಆಡಳಿತಾರೂಢ ಬಿಜೆಪಿ 2024 ರಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ಹೇಗೆ ಎದುರಿಸುತ್ತದೆ ಮತ್ತು ಹೇಗೆ ಸಜ್ಜಾಗಲಿದೆ ಎಂಬುದಕ್ಕೆ ಇದು ಬೂಸ್ಟ್ ನೀಡುತ್ತದೆ ಎಂದು ಪಿಎಂಎಸ್‌ನ ಹೆಮ್ ಸೆಕ್ಯುರಿಟೀಸ್ ಮುಖ್ಯಸ್ಥ ಮೋಹಿತ್ ನಿಗಮ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತುತ ಷೇರುಪೇಟೆಯಲ್ಲಿ ಸೆನ್ಸೆಕ್ಸ್ 955 ಅಂಕಗಳ ಏರಿಕೆ ಕಂಡು 55,585 ರಲ್ಲಿ ಹಾಗೂ ನಿಫ್ಟಿ 266 ಅಂಕಗಳ ಹೆಚ್ಚಳ ಬಳಿಕ 16,611 ರಲ್ಲಿ ವಹಿವಾಟು ನಡೆಸುತ್ತಿತ್ತು.
ಇದನ್ನೂ ಓದಿ: ನಾಲ್ಕು ಲಕ್ಷ ಮಹಿಳೆಯರಿಗೆ ಉದ್ಯೋಗದ ಯೋಜನೆ: ಸಿಎಂ ಬಸವರಾಜ ಬೊಮ್ಮಾಯಿ