ಮುಂಬೈ: ಷೇರುಪೇಟೆಯಲ್ಲಿ ಗೂಳಿ ಓಟ ಮುಂದುವರೆದಿದ್ದು, ದಿನದಾಂತ್ಯಕ್ಕೆ ಸೆನ್ಸೆಕ್ಸ್ 777 ಅಂಕಗಳ ಜಿಗಿತಗೊಂಡು 58,461ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 234 ಅಂಕಗಳ ಏರಿಕೆಯಾಗಿ 17,400ಕ್ಕೆ ತಲುಪಿದೆ.
ಎಚ್‌ಡಿಎಫ್‌ಸಿ, ಇನ್ಫೋಸಿಸ್ ಹಾಗೂ ಟಿಸಿಎಸ್ ಕಂಪನಿಗಳು ಲಾಭದ ಹಳಿಗೆ ಮರಳಿವೆ. ಎಚ್‌ಡಿಎಫ್‌ಸಿ ಲಾಭಗಳಿಸಿದ ಕಂಪನಿಗಳ ಪೈಕಿ ಅಗ್ರಸ್ಥಾನದಲ್ಲಿದ್ದು, ಶೇ.4 ಏರಿಕೆಯಾಗಿದೆ. ಪವರ್‌ಗ್ರಿಡ್, ಸನ್ ಫಾರ್ಮಾ, ಟಾಟಾ ಸ್ಟೀಲ್, ಟೆಕ್ ಮಹೀಂದ್ರ ಮತ್ತು ಬಜಾಜ್ ಫಿನ್‌ಸರ್ವ್ ಲಾಭದಲ್ಲಿದ್ದ ಇತರ ಕಂಪನಿಗಳಾಗಿವೆ.
ಮತ್ತೊಂದೆಡೆ ಐಸಿಐಸಿಐ ಬ್ಯಾಂಕ್ ಹಾಗೂ ಆಕ್ಸಿಸ್ ಬ್ಯಾಂಕ್ ನಷ್ಟ ಅನುಭವಿಸಿದವು. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ನಕಾರಾತ್ಮ ಬೆಳವಣಿಗೆಯ ನಡುವೆಯೂ ದೇಶೀಯ ಸ್ಥೂಲ ಆರ್ಥಿಕ ದತ್ತಾಂಶಗಳ ನಡುವೆ ಐಟಿ, ಹಣಕಾಸು ಮತ್ತು ಸ್ಟೀಲ್ ಕಂಪನಿಗಳ ಷೇರುಗಳಲ್ಲಿನ ಲಾಭದಿಂದಾಗಿ ರಾಷ್ಟ್ರೀಯ ಸೂಚ್ಯಂಕ ಏರುತ್ತಲೇ ಇದೆ ಎಂದು ಜಿಯೋಜಿತ್ ಹಣಕಾಸು ಸೇವಾ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.
ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು ಅಕ್ಟೋಬರ್‌ನಲ್ಲಿ ಬಜೆಟ್ ಅಂದಾಜಿನ ಶೇ. 36.3 ರಷ್ಟಿದ್ದು, ಸುಧಾರಿತ ಆದಾಯ ಸಂಗ್ರಹದ ಕಾರಣದಿಂದಾಗಿ ಷೇರುಪೇಟೆ ಉತ್ತಮವಾಗಿದೆ ಎಂದು ನಾಯರ್ ವಿವರಿಸಿದರು.
ಏಷ್ಯಾದ ಇತರ ಭಾಗಗಳಾದ ಹಾಂಕಾಂಗ್ ಹಾಗೂ ಸಿಯೋಲ್ ಷೇರುಪೇಟೆಗಳು ಲಾಭದೊಂದಿಗೆ ಕೊನೆಗೊಂಡರೆ, ಶಾಂಘೈ ಮತ್ತು ಟೋಕಿಯೊ ನಷ್ಟದಲ್ಲಿದ್ದವು. ಅಂತಾರಾಷ್ಟ್ರೀಯ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 2.41 ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್ ತೈಲ 70.53 ಡಾಲರ್‌ಗೆ ತಲುಪಿದೆ.
ಇದನ್ನೂ ಓದಿ: ಕೃಷಿ ಯಂತ್ರೋಪಕರಣಗಳ ಖರೀದಿಗೆ ರೈತರಿಗೆ ಸಾಲ.. ಅದಾನಿ ಗ್ರೂಪ್ ಜೊತೆ ಎಸ್ಬಿಐ ಒಡಂಬಡಿಕೆ