ಮುಂಬೈ: ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಮಂಗಳವಾರ ಆರಂಭಿಕ ವಹಿವಾಟಿನಲ್ಲಿ 1,300 ಪಾಯಿಂಟ್‌ಗಳಷ್ಟು ಏರಿಕೆ ಕಂಡಿದ್ದು, ಜಾಗತಿಕ ಷೇರುಗಳ ಚೇತರಿಕೆಯ ಮಧ್ಯೆ ಬ್ಯಾಂಕ್, ಐಟಿ ಮತ್ತು ಆಟೋ ಷೇರುಗಳು ಲಾಭ ಗಳಿಸಿವೆ.
ಬಿಎಸ್‌ಇ ಸೆನ್ಸೆಕ್ಸ್ ಮಧ್ಯಾಹ್ನ 1.41ರ ವೇಳೆಗೆ 2,031 ಅಂಕ ಅಥವಾ ಶೇ 7.30ರಷ್ಟು ಏರಿಕೆಯಾಗಿ 29,604.17 ಅಂಕಗಳ ಮಟ್ಟದಲ್ಲಿ ವಹಿವಾಟು ನಡೆಸಿತು.
ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳಲ್ಲಿ ಭಾರಿ ಖರೀದಿ ಕಂಡುಬಂದ ಹಿನ್ನೆಲೆಯಲ್ಲಿ ಮಂಗಳವಾರ ಸುಮಾರು 8 ಪ್ರತಿಶತದಷ್ಟು ಏರಿಕೆಯಾಯಿತು. ಭಾರತೀಯ ಇಕ್ವಿಟಿ ಮಾರುಕಟ್ಟೆ 2009 ರಿಂದೀಚೆಗೆ ಇಂದು ಅತಿದೊಡ್ಡ ಏಕದಿನ ಲಾಭ ದಾಖಲಿಸಿತು.
ದಿನದ ವಹಿವಾಟು ಅಂತ್ಯದ ವೇಳೆಗೆ ಬಿಎಸ್ಇ ಸೆನ್ಸೆಕ್ಸ್ 2476.26 ಅಂಶಗಳು ಅಥವಾ ಶೇ 8.01ರಷ್ಟು ಏರಿಕೆಯಾಗಿ 30067.21 ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 708.40 ಅಂಶಗಳ ಏರಿಕೆಯೊಂದಿಗೆ 8792.20 ಅಂಶಗಳ ಮಟ್ಟದಲ್ಲಿ ಕೊನೆಗೊಂಡಿತು.
ಇಂಡಸ್‌ಇಂಡ್ ಬ್ಯಾಂಕ್ ಶೇ 17ರಷ್ಟು, ಆಕ್ಸಿಸ್ ಬ್ಯಾಂಕ್ ಶೇ 15ರಷ್ಟು, ಐಸಿಐಸಿಐ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್ ಮತ್ತು ಸನ್ ಫಾರ್ಮಾ ಶೇ 10ಕ್ಕಿಂತ ಅಧಿಕ ಮೌಲ್ಯದಷ್ಟು ಏರಿಕೆ ದಾಖಲಿಸಿದವು. ರಿಲಯನ್ಸ್ ಇಂಡಸ್ಟ್ರೀಸ್ ಶೇ 9, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 7ರಷ್ಟು ಹೆಚ್ಚಳ ಕಂಡುಬಂತು.
ಕಳೆದ ಕೆಲ ತಿಂಗಳಿಂದ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ವಿಧಿಸಲಾಗಿದ್ದ 24 ಔಷಧಗಳ ಮೇಲಿನ ರಫ್ತು ನಿರ್ಬಂಧವನ್ನು ಸರ್ಕಾರ ತೆಗೆದುಹಾಕಿದೆ. ಇದಾದ ಬಳಿಕ ನಿಫ್ಟಿ ವಲಯ ಸೂಚ್ಯಂಕ ಶೇ 10ರಷ್ಟು ಏರಿಕೆಯಾಗಿದ್ದು, ಫಾರ್ಮಾ ವಲಯದ ಷೇರುಗಳು ಗ್ರೀನ್ ವಲಯದಲ್ಲಿ ವಹಿವಾಟು ನಡೆಸಿದವು.