ಮುಂಬೈ: ರಿಲಯನ್ಸ್ ಜಿಯೋದಲ್ಲಿ ಫೇಸ್‌ಬುಕ್ 5.7 ಬಿಲಿಯನ್ ಡಾಲರ್ (43,574) ಹೂಡಿಕೆಯ ಪಾಲುದಾರಿಕೆ ಒಪ್ಪಂದ ಹೊರಬಿದ್ದ ಬೆನ್ನಲ್ಲೇ ಷೇರುಪೇಟೆಯ ಸೆನ್ಸೆಕ್ಸ್ ಜಿಗಿತ ದಾಖಲಿಸಿದೆ.
ಜಿಯೋದಲ್ಲಿ ಫೇಸ್‌ಬುಕ್ ಶೇ 9.9ರಷ್ಟು ಹೂಡಿಕೆ ಮಾಡುವುದಾಗಿ ಘೋಷಿಸಿತು. ತತ್ಪರಿಣಾಮ ಬುಧವಾರದ ವಹಿವಾಟಿನಲ್ಲಿ ರಿಲಯನ್ಸ್ ಷೇರು ಬೆಲೆ ಶೇ 8ರವರೆಗೂ ಜಿಗಿದಿದೆ. ಇದರೊಂದಿಗೆ ಸೆನ್ಸೆಕ್ಸ್ ಸಹ ಏರುಗತಿಯಲ್ಲಿ ಸಾಗಿತು.
ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ 743 ಅಂಕ ಏರಿಕೆಯೊಂದಿಗೆ 31,379.55 ಅಂಕಗಳ ಮಟ್ಟದಲ್ಲಿ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 205.85 ಅಂಕ ಅಥವಾ ಶೇ 2.29ರಷ್ಟು ಹೆಚ್ಚಳದೊಂದಿಗೆ 9,187.30 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಂಡಿತು.
ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಶೇ 10ರಷ್ಟು ಪಾಲು ಖರೀದಿಸಲು ಫೇಸ್‌ಬುಕ್ 5.7 ಬಿಲಿಯನ್ ಡಾಲರ್ (43,574 ಕೋಟಿ ರೂ.) ಹೂಡಿಕೆ ಮಾಡುವುದಾಗಿ ಘೋಷಿಸಿದ ತಕ್ಷಣ ರಿಲಯನ್ಸ್ ಇಂಡಸ್ಟ್ರೀಸ್, ಸೆನ್ಸೆಕ್ಸ್‌ಗೆ 350ಕ್ಕಿಂತ ಹೆಚ್ಚು ಅಂಕಗಳ ಏರಿಕೆಗೆ ಕಾರಣವಾಯಿತು. ಈ ಒಪ್ಪಂದ ರಿಲಯನ್ಸ್, ಫೇಸ್‌ಬುಕ್ ಅನ್ನು ಅತಿದೊಡ್ಡ ಷೇರು ಪಾಲುದಾರನಾಗಿ ತನ್ನ ಇಂಡಸ್ಟ್ರೀಸ್ಗೆ ಸೇರಿಸಿಕೊಂಡಿತು.
ಏಷ್ಯಾನ್ ಪೇಯಿಂಟ್ ಇಂಡಸ್ಇಂಡ್ ಬ್ಯಾಂಕ್, ನೆಸ್ಲೆ ಇಂಡಿಯಾ, ಮಾರುತಿ, ಹೀರೋ ಮೋಟೊಕಾರ್ಪ್ ಮತ್ತು ಎಚ್‌ಯುಎಲ್ ಲಾಭದಲ್ಲಿ ಶೇ 5ರಷ್ಟು ಏರಿಕೆ ಕಂಡುಬಂತು. ಒಎನ್‌ಜಿಸಿ, ಎಲ್&ಟಿ ಮತ್ತು ಪವರ್‌ಗ್ರೀಡ್ ಷೇರುಗಳು ರೆಡ್ ವಲಯದಲ್ಲಿ ಕೊನೆಗೊಂಡವು.
ಜಾಗತಿಕ ಮಾರುಕಟ್ಟೆಗಳ ಸಕಾರಾತ್ಮಕ ಸೂಚನೆಗಳು ಸ್ಥಳೀಯ ಹೂಡಿಕೆದಾರರ ಮನೋಭಾವ ಹೆಚ್ಚಿಸಿವೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಶಾಂಘೈ, ಹಾಂಕಾಂಗ್ ಮತ್ತು ಸಿಯೋಲ್ ಪೇಟೆಗಳು ಲಾಭದೊಂದಿಗೆ ಕೊನೆಗೊಂಡರೆ ಟೋಕಿಯೊ ನಷ್ಟ ಅನುಭವಿಸಿತು.