ಮುಂಬೈ: ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್ ರೂಪಾಂತರಿ ಒಮಿಕ್ರಾನ್ ಮುಂಬೈ ಷೇರುಪೇಟೆಗೆ ಇಂದು ಭಾರಿ ಪೆಟ್ಟು ನೀಡಿದೆ. ದಿನದ ಆರಂಭದಲ್ಲೇ ಸೆನ್ಸೆಕ್ಸ್ 1,343 ಅಂಕಗಳ ಭಾರಿ ಕುಸಿತ ಕಂಡು ಬಳಿಕ ಅದು ಇನ್ನೂ ಹೆಚ್ಚಿನ ಕುಸಿತ ಅನುಭವಿಸಿತ್ತು. 3.30 ರ ವೇಳೆಗೆ 1189 ಅಂಕಗಳ ನಷ್ಟ ಅನುಭವಿಸಿತ್ತು.
ಬಜಾಬ್ ಫೈನಾನ್ಸ್ ನಷ್ಟ ಅನುಭವಿಸಿದ ಕಂಪನಿಗಳ ಪೈಕಿ ಅಗ್ರಸ್ಥಾನ ಪಡೆದಿದೆ. ಈ ಸಂಸ್ಥೆಯ ಷೇರುಗಳ ಮೌಲ್ಯ ಶೇ.4 ರಷ್ಟು ಕುಸಿತ ಕಂಡಿದೆ. ನಂತರದ ಸ್ಥಾನದಲ್ಲಿ ಟಾಟಾ ಸ್ಟೀಲ್, ಎಸ್‌ಬಿಐ, ಎನ್‌ಟಿಪಿಸಿ, ಎಂ & ಎಂ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಇದೆ. ಆದರೆ, ಸನ್ ಫಾರ್ಮಾ ಮಾತ್ರ ಲಾಭ ಗಳಿಸಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಮಾರಾಟಗಾರರಾಗಿ ಉಳಿದಿದ್ದು, ಕಳೆದ ಶುಕ್ರವಾರ 2,069.90 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಏರುತ್ತಿರುವ ಹಣದುಬ್ಬರ, ಸೆಂಟ್ರಲ್ ಬ್ಯಾಂಕ್‌ಗಳ ಬೆಳವಣಿಗೆ ಹಾಗೂ ರೂಪಾಂತರಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದು, ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಆರ್ಥಿಕತೆಗಳಲ್ಲಿನ ನಿಧಾನಗತಿಯ ಬೆಳವಣಿಗೆಯೂ ಷೇರಪೇಟೆಯಲ್ಲಿ ಕುಸಿತಕ್ಕೆ ಕಾರಣವಾಗಿದೆ ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿಕೆ ವಿಜಯಕುಮಾರ್ ಹೇಳಿದ್ದಾರೆ.
ವಿಶೇಷವಾಗಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಾರಾಟವನ್ನು ಮುಂದುವರೆಸಿದರೆ ಮಾರುಕಟ್ಟೆಯಲ್ಲಿ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಆದರೆ ನಕಾರಾತ್ಮಕ ಬೆಳವಣಿಗೆ ದೀರ್ಘಕಾಲ ಉಳಿಯುವ ಸಾಧ್ಯತೆಯಿಲ್ಲ. ಒಮಿಕ್ರಾನ್ ವೈರಸ್ ವೇಗವಾಗಿ ಹರಡುತ್ತಿದ್ದರೂ, ವೈರಸ್ ಅಪಾಯಕಾರಿ ಎಂದು ಸಾಬೀತಾಗಿಲ್ಲ. ಎಫ್‌ಐಐಗಳು ಶೀಘ್ರದಲ್ಲೇ ಖರೀದಿಗೆ ಮರಳುತ್ತಾರೆ ಎಂದು ಹೇಳಿದ್ದಾರೆ.
ಏಷ್ಯಾದ ಇತರೆ ಮಾರುಕಟ್ಟೆಗಳಾದ ಶಾಂಘೈ, ಹಾಂಗ್ ಕಾಂಗ್, ಟೋಕಿಯೋ ಮತ್ತು ಸಿಯೋಲ್‌ನಲ್ಲಿನ ಷೇರುಗಳು ಮಧ್ಯ-ಸೆಷನ್ ವ್ಯವಹಾರಗಳಲ್ಲಿ ಭಾರೀ ನಷ್ಟದೊಂದಿಗೆ ವ್ಯಾಪಾರ ಮಾಡುತ್ತಿದ್ದವು. ಅಂತಾರಾಷ್ಟ್ರೀಯ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಶೇ.2.45 ಕುಸಿತವಾಗಿ 71.72 ಡಾಲರ್‌ಗೆ ಮಾರಾಟ ಆಗುತ್ತಿದೆ.
ಇದನ್ನೂ ಓದಿ: ಮುಂಬೈ-ಪುಣೆ ಎಕ್ಸ್‌ಪ್ರೆಸ್ ಹೈವೇಗಾಗಿ ರಿಲಯನ್ಸ್ ಟೆಂಡರ್ ತಿರಸ್ಕರಿಸಿದ್ದೆ : ಸಚಿವ ನಿತಿನ್ ಗಡ್ಕರಿ