ಮುಂಬೈ: ಧನಾತ್ಮಕ ದೇಶೀಯ ಮತ್ತು ಜಾಗತಿಕ ಸೂಚನೆಗಳ ಮಧ್ಯೆ ಹೂಡಿಕೆದಾರರ ಮನೋಭಾವವು ಲವಲವಿಕೆಯಿಂದ ಕೂಡಿದ್ದು, ಬೆಂಚ್‌ಮಾರ್ಕ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ದಾಖಲೆಯ ಜಿಗಿತ ಮುಂದುವರಿಸಿವೆ.
ಇಂದಿನ ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ 228.73 ಅಂಕ ಏರಿಕೆಯಾಗಿ 47,582.48 ಅಂಕಗಳ ಮಟ್ಟದಲ್ಲಿ ಹೊಸ ದಾಖಲೆಯೊಂದಿಗೆ ಮುನ್ನುಗುತ್ತಿದೆ. ಬೆಳಗ್ಗೆ 11.42ರ ವೇಳೆ 87 ಅಂಕ ಹೆಚ್ಚಳದ ಮೂಲಕ 47477.05 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ.
ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಕೂಡ 66.50 ಅಂಕ ಜಿಗಿದು 13,939.70 ಅಂಕಗಳ ಹೊಸ ಗರಿಷ್ಠ ಮಟ್ಟಕ್ಕೆ ತಲುಪಿದೆ.
ಸೆನ್ಸೆಕ್ಸ್ ವಿಭಾಗದಲ್ಲಿ ಇಂಡಸ್ಇಂಡ್ ಬ್ಯಾಂಕ್, ಎಚ್‌ಸಿಎಲ್ ಟೆಕ್, ಕೊಟಾಕ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಬಜಾಜ್ ಆಟೋ ಟಾಪ್ ಗೇನರ್ಗಳಾಗಿದ್ದರೇ
ನೆಸ್ಲೆ, ಏಷ್ಯಾನ್ ಪೆಯಿಂಟ್ಸ್ ಮತ್ತು ಪವರ್‌ಗ್ರೀಡ್ ಹೊರತುಪಡಿಸಿ ಎಲ್ಲಾ ಷೇರುಗಳು ಗ್ರೀನ್ ವಲಯದಲ್ಲಿ ವಹಿವಾಟು ನಡೆಸುತ್ತಿವೆ.
ಓದಿ: ರಿಚಾ ಇಂಡಸ್ಟ್ರೀಸ್ ವಿರುದ್ಧ 237 ಕೋಟಿ ವಂಚನೆ ಆರೋಪ: ಸಿಬಿಐನಿಂದ ಎಫ್ಐಆರ್
ಸೋಮವಾರದಂದು ಸೆನ್ಸೆಕ್ಸ್ 380.21 ಅಂಕ ಏರಿಕೆಯಾಗಿ ಸಾರ್ವಕಾಲಿಕ ಮುಕ್ತಾಯದ 47,353.75 ಅಂಕಗಳ ಮಟ್ಟ ತಲುಪಿತು. ನಿಫ್ಟಿ ಕೂಡ 123.95 ಅಂಕ ಏರಿಕೆಯಾಗಿ 13,873.20 ಅಂಕಗಳ ಹೊಸ ಮುಕ್ತಾಯಕ್ಕೆ ತಲುಪಿತು.
ಅಮೆರಿಕ ಬಹುನಿರೀಕ್ಷಿತ ಕೊರೊನಾ ವೈರಸ್ ಪರಿಹಾರ ಮಸೂದೆ ಅಂಗೀಕಾರ ಹಾಕಿದ ನಂತರ ಜಾಗತಿಕ ಮಾರುಕಟ್ಟೆಗಳಲ್ಲಿ ಧನಾತ್ಮಕ ಪ್ರವೃತ್ತಿ ಕಂಡುಬಂದು ಏಷ್ಯಾದ ಷೇರುಗಳು ಹೆಚ್ಚಿನ ಮಟ್ಟದಲ್ಲಿ ವಹಿವಾಟು ನಿರತವಾಗಿವೆ.
ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2.3 ಟ್ರಿಲಿಯನ್ ಡಾಲರ್ ವೆಚ್ಚದ ಮಸೂದೆಗೆ ಸಹಿ ಹಾಕಿದರು. ಇದರಲ್ಲಿ 900 ಬಿಲಿಯನ್ ಡಾಲರ್ ಕೊರೊನಾ ವೈರಸ್ ಪರಿಹಾರ ಪ್ಯಾಕೇಜ್ ಸೇರಿದೆ.