ಮುಂಬೈ: ದೇಶದಲ್ಲಿ ಕೋವಿಡ್ ರೂಪಾಂತರಿ ಒಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರುವ ನಡುವೆಯೂ ಹೊಸ ವರ್ಷದ ಮೊದಲ ವಹಿವಾಟಿನ ದಿನವೇ ಮುಂಬೈ ಷೇರುಪೇಟೆಯಲ್ಲಿ ಗೂಳಿ ಓಟ ಮುಂದುವರೆದಿದೆ.
ದಿನದ ಆರಂಭದಿಂದಲೂ ಹಸಿರು ಬಣ್ಣದಲ್ಲೇ ಸಾಗಿದ ಸೆನ್ಸೆಕ್ಸ್ ದಿನದಂತ್ಯಕ್ಕೆ 929 ಅಂಕಗಳ ಜಿಗಿತದೊಂದಿಗೆ 59,182ರಲ್ಲಿ ವಹಿವಾಟು ಮುಗಿಸಿತು. ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ ಕೂಡ 271 ಅಂಕಗಳ ಏರಿಕೆಯಾಗಿ 17,625ಕ್ಕೇರಿತು.
ಆಟೋಮೊಬೈಲ್ ಕಂಪನಿಗಳ ಪೈಕಿ ಐಷರ್ ಮೋಟರ್ಸ್ ಷೇರುಗಳು ಶೇ. 5ರಷ್ಟು ಲಾಭ ಗಳಿಸುವ ಮೂಲಕ ಅಗ್ರ ಸ್ಥಾನ ಪಡೆಯಿತು. ಅಶೋಕ್ ಲೈಲ್ಯಾಂಡ್, ಟಾಟಾ ಮೋಟಾರ್ಸ್, ಮಾರುತಿ ಸುಜುಕಿ ಹಾಗೂ ಬಜಾಜ್ ಆಟೋ ಶೇ.1-3ರಷ್ಟು ಲಾಭ ಗಳಿಸಿ ನಂತರದ ಸ್ಥಾನ ಪಡೆದಿವೆ.
2021ರ ಡಿಸೆಂಬರ್‌ನಲ್ಲಿ ಆಟೋಮೊಬೈಲ್ ಕಂಪನಿಗಳ ವ್ಯವಹಾರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಚಿಪ್ ಕೊರತೆಯಿಂದಾಗಿ ಪ್ರಯಾಣಿಕ ವಾಹನ ಉದ್ಯಮದ ಪರಿಣಾಮ ಬೀರಿತು. ಪ್ರಯಾಣಿಕ ವಾಹನ ಉದ್ಯಮದಲ್ಲಿ ಗ್ರಾಹಕರ ಭಾವನೆಯು ಸಕಾರಾತ್ಮಕವಾಗಿಯೇ ಇದೆ. ಚಿಪ್ ಕೊರತೆಯ ಪರಿಹಾರದ ನಂತರ ಶೀಘ್ರವಾಗಿ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ ಎಂದು ಕೋಟಾಕ್ ಸೆಕ್ಯುರಿಟೀಸ್‌ನ ಫಂಡಮೆಂಟಲ್ ರಿಸರ್ಚ್‌ನ ಉಪ ಉಪಾಧ್ಯಕ್ಷ ಅರುಣ್ ಅಗರ್ವಾಲ್ ಹೇಳಿದ್ದಾರೆ.
ಕಳೆದ ಆರು ತಿಂಗಳಿನಿಂದ ಸತತವಾಗಿ ಜಿಎಸ್‌ಟಿ 1 ಲಕ್ಷ ಕೋಟಿ ರೂಪಾಯಿಗಳಿಗಿಂತ ಅಧಿಕ ಸಂಗ್ರಹವಾಗುತ್ತಿದೆ. ಕಳೆದ ಡಿಸೆಂಬರ್‌ನಲ್ಲಿ 1.29 ಲಕ್ಷ ಕೋಟಿ ರೂಪಾಯಿಗಳ ಜಿಎಸ್‌ಟಿ ಸಂಗ್ರಹವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.13ರಷ್ಟು ಹೆಚ್ಚಳವಾಗಿದೆ. ಇದು ಕೂಡ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ.
ಮತ್ತೊಂದೆಡೆ, ದೇಶದಲ್ಲಿ ಕೋವಿಡ್ ರೂಪಾಂತರಿ ಒಮಿಕ್ರಾನ್ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿದ್ದರೂ ಯಾವುದೇ ರಾಜ್ಯ ಲಾಕ್‌ಡೌನ್‌ನಂತಹ ಕಂಠಿಣ ನಿರ್ಧಾರಗಳನ್ನು ಕೈಗೊಂಡಿಲ್ಲ.
ಇದನ್ನೂ ಓದಿ: 2020-21ರಲ್ಲಿ ತತ್ಕಾಲ್, ಪ್ರೀಮಿಯಂ ತತ್ಕಾಲ್ ಟಿಕೆಟ್‌ನಿಂದ ರೈಲ್ವೆಗೆ 500 ಕೋಟಿ ರೂ.ಆದಾಯ!