ಮುಂಬೈ: ಅಮೆರಿಕ ಮತ್ತು ಯುರೋಪ್‌ನಲ್ಲಿ ಆರ್ಥಿಕ ಹಿಂಜರಿತ ಮರುಕಳಿಸಲಿದೆ ಎಂಬ ವರದಿಗೆ ಸೋಮವಾರ ಮುಗ್ಗರಿಸಿದ್ದ ಸೆನ್ಸೆಕ್ಸ್, ಮಂಗಳವಾರದ ವಹಿವಾಟಿನಲ್ಲಿ ಚೇತರಿಸಿಕೊಂಡು ಹಿಂದಿನ ಲಯಕ್ಕೆ ಮರಳಿದೆ.
ಏಷ್ಯಾ ಷೇರುಪೇಟೆಗಳು, ಅಮೆರಿಕದ ಡೊಜೋನ್ ಚೇತರಿಕೆ ಹಾಗೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಭರಾಟೆಯ ಖರೀದಿಯಿಂದ ಮುಂಬೈ ಪೇಟೆ ಮಂಗಳವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ ಸೂಚ್ಯಂಕ 424.5 ಅಂಕಗಳ ಜಿಗಿತದೊಂದಿಗೆ 38,233 ಮಟ್ಟದಲ್ಲೂ ನಿಫ್ಟಿ 129 ಅಂಶಗಳ ಏರಿಕೆಯೊಂದಿಗೆ 11,483 ಅಂಶಗಳ ವೃದ್ಧಿಯೊಂದಿಗೆ ಆಶಾದಾಯಕವಾಗಿ ಅಂತ್ಯಕಂಡಿತು.
ಇಂದಿನ ಪೇಟೆಯಲ್ಲಿ ಎಸ್ಬಿಐಎನ್, ವೆದಲ್, ರಿಲಯನ್ಸ್, ಎನ್ಟಿಪಿಸಿ, ಯೆಸ್ ಬ್ಯಾಂಕ್, ಬಜಾಜ್ ಫೈನಾನ್ಸ್, ಕೋಟಕ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಏಷ್ಯನ್ ಪೇಂಟ್ಸ್ ಷೇರುಗಳ ಮೌಲ್ಯದಲ್ಲಿ ಏರಿಕೆ ಕಂಡಿದ್ದರೆ ಎಚ್ಡಿಎಫ್ಸಿ, ಟಿಸಿಎಸ್, ಕೋಲ್ ಇಂಡಿಯಾ, ಎಲ್ಟಿ, ಐಟಿಸಿ, ಬಜಾಜ್ ಆಟೋ ಷೇರುಗಳ ಬೆಲೆಯಲ್ಲಿ ಕ್ಷೀಣಿಸಿತು.
ಎರಡು ದಿನ ಜಾಗತಿಕ ಷೇರುಪೇಟೆಗಳ ಹಿಂಜರಿಕೆಗೆ ಕಾರಣ?
ಅಮೆರಿಕದಲ್ಲಿ ಬಾಂಡ್‌ಗಳ (ಸಾಲಪತ್ರ) ಉತ್ಪತ್ತಿಯ ಪ್ರಮಾಣ ಕಳೆದ 10 ವರ್ಷಗಳಲ್ಲಿಯೇ ಕನಿಷ್ಠ ಮಟ್ಟಕ್ಕೆ ಕುಸಿದಿರುವುದು ಹೂಡಿಕೆದಾರರನ್ನು ಆತಂಕಕ್ಕೀಡು ಮಾಡಿದೆ. ಅಮೆರಿಕ, ಯುರೋಪ್ ಸೇರಿದಂತೆ ನಾನಾ ಕಡೆಗಳಲ್ಲಿ ಬಾಂಡ್‌ಗಳ ಹೂಡಿಕೆಯಲ್ಲಿ ಲಭಿಸುವ ಆದಾಯದ ಪ್ರಮಾಣ ಕುಸಿಯುತ್ತಿದೆ. ಇನ್ನೊಂದು ಕಡೆ ಅಮೆರಿಕದ ಫೆಡರಲ್ ರಿಸರ್ವ್ ಈ ವರ್ಷ ಬಡ್ಡಿ ದರಗಳನ್ನು ಏರಿಸುವುದಿಲ್ಲವೆಂದು ಸ್ಪಷ್ಟಪಡಿಸಿತ್ತು. ಹೀಗಾಗಿ, ಫೆಡರಲ್ ರಿಸರ್ವ್‌ನ ಬಿಗಿ ಆರ್ಥಿಕ ನೀತಿಯು ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯನ್ನು ಉಂಟು ಮಾಡಿತು.
ಭಾರತೀಯ ಮಾರುಕಟ್ಟೆಗೆ ಆತಂಕವಿಲ್ಲ, ಏಕೆ?
ಅಮೆರಿಕ ಹಾಗೂ ಜಾಗತಿಕ ಆರ್ಥಿಕತೆಗೆ ಹಿಂಜರಿತ ಸಂಭವಿಸಿದರೂ, ಭಾರತದ ಷೇರು ಹೂಡಿಕೆದಾರರು ಆತಂಕಪಡಬೇಕಾಗಿಲ್ಲ, ಭಾರತದ ಜಿಡಿಪಿ ವೇಗವಾಗಿ ಬೆಳೆಯುತ್ತಿದೆ. ಹಣದುಬ್ಬರ ನಿಯಂತ್ರಣದಲ್ಲಿದೆ. ಹೀಗಾಗಿ ಆರ್‌ಬಿಐಗೆ ಬಡ್ಡಿ ದರಗಳನ್ನು ಇಳಿಸಲು ಅವಕಾಶ ಇದೆ. ಬಡ್ಡಿ ದರ ಇಳಿಸಿದರೆ ಆರ್ಥಿಕ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.