ಮುಂಬೈ: ಭಾರತೀಯ ಬ್ಯಾಂಕಿಂಗ್ ಕ್ಷೇತ್ರಗಳ ಮೇಲಿನ ಹಣಕಾಸು ಬಿಕ್ಕಟ್ಟು ಇಡೀ ವಾರದ ಮಾರುಕಟ್ಟೆಯ ವಹಿವಾಟನ್ನೇ ಆಪೋಶನ ತೆಗೆದುಕೊಂಡಿದ್ದು, ಮೂರನೇ ದಿನವೂ ಮುಂಬೈ ಪೇಟೆಯ ಸೆನ್ಸೆಕ್ಸ್ ಇಳಿಕೆ ದಾಖಲಿಸಿದೆ.
ಕೇಂದ್ರ ಸರ್ಕಾರ ಸೆ. 20ರಂದು ಕಾರ್ಪೊರೇಟ್ ಮೇಲಿನ ತೆರಿಗೆ ಕಡಿತ ಘೋಷಿಸಿದ ಬಳಿಕ ಅಲ್ಪ ಚೇತರಿಸಿಕೊಂಡಿದ್ದ ಮುಂಬೈ ಪೇಟೆಯು ಮತ್ತೆ ಈ ಹಿಂದಿನ ಕುಸಿತಕ್ಕೆ ಮರಳಿದೆ. ಕಳೆದ ಒಂದು ವಾರದಲ್ಲಿ ಬೆಂಚ್‌ಮಾರ್ಕ್ ಸೂಚ್ಯಂಕದ ಶೇ. 45ರಷ್ಟು ಕುಸಿತಕ್ಕೆ ಹಣಕಾಸು ವಲಯದ ಪಾಲು ಅಧಿಕವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
'ಬ್ಯಾಂಕಿಂಗ್ ವ್ಯವಸ್ಥೆಯು ಸುರಕ್ಷಿತ ಮತ್ತು ಸ್ಥಿರವಾಗಿದೆ. ಯಾರೂ ಭಯಪಡುವ ಅಗತ್ಯವಿಲ್ಲ' ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೆಲ ದಿನಗಳ ಹಿಂದೆ ಟ್ವೀಟ್ ಮಾಡಿತ್ತು. ಒಂದು ದಿನ ರಜೆಯ ನಂತರ ಆರಂಭವಾದ ರಾಷ್ಟ್ರೀಯ ಷೇರು ಮಾರುಕಟ್ಟೆ ನಕರಾತ್ಮಕವಾಗಿ ಆರಂಭ ಕಂಡಿದೆ.
ಬ್ಯಾಂಕ್ ವಲಯದ ಬಿಕ್ಕಟ್ಟು:
ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರ ಬ್ಯಾಂಕ್ ಲಿಮಿಟೆಡ್ (ಪಿಎಂಸಿ), 2008ರಿಂದ ಆರ್‌ಬಿಐನ ನಿಯಮಗಳನ್ನು ಯಥೇಚ್ಛವಾಗಿ ಉಲ್ಲಂಘಿಸಿ ನೈಜತೆಯನ್ನು ಮರೆಮಾಚಿದೆ ಎಂದು ಪಿಎಂಸಿಯ ಮಾಜಿ ಎಂಡಿಯೊಬ್ಬರು ಆರೋಪಿಸಿದ್ದಾರೆ. ಅದರ ಇತ್ತೀಚಿನ ಬೆಳವಣಿಗೆಗಳು ಮಂದಗತಿಯಲ್ಲಿ ಸಾಗುತ್ತಿರುವ ಆರ್ಥಿಕತೆಗೆ ಇನ್ನಷ್ಟು ಹಿನ್ನಡೆಯನ್ನುಂಟು ಮಾಡಿವೆ.
ಇಂಡಿಯಾ ಬುಲ್ಸ್ ಹೌಸಿಂಗ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಯೋಜಿಸಿರುವ ಲಕ್ಷ್ಮಿ ವಿಲಾಸ್ ಬ್ಯಾಂಕ್ ಲಿಮಿಟೆಡ್‌ಗೆ ಸೆಂಟ್ರಲ್ ಬ್ಯಾಂಕ್ ನಿರ್ಬಂಧ ಹೇರಿದೆ.
ಕಾರ್ಪೊರೇಟ್ ಸಾಲವನ್ನು ಮುಕ್ತಗೊಳಿಸುವ ಸಾಧ್ಯತೆಯ ಕುರಿತು ಯೆಸ್ ಬ್ಯಾಂಕ್ ಲಿಮಿಟೆಡ್‌ನ ಷೇರುಗಳು ಎರಡು ದಿನಗಳಲ್ಲಿ ಶೇ. 34 ಪ್ರತಿಶತದಷ್ಟು ಕುಸಿತ ಕಂಡಿವೆ.
ಮೇಲಿನ ಈ ಎಲ್ಲ ಕಾರಣಗಳಿಂದ ಗುರುವಾರದ ವಹಿವಾಟಿನಲ್ಲಿ ಮುಂಬೈ ಪೇಟೆಯ ಸೆನ್ಸೆಕ್ಸ್ ಮಧ್ಯಾಹ್ನ 2.14ರ ವೇಳೆಗೆ 182.50 ಅಂಕಗಳ ಇಳಿಕೆ ಕಂಡು 38,122.91 ಮಟ್ಟದಲ್ಲೂ, ನಿಫ್ಟಿ 46.65 ಅಂಶಗಳ ಕುಸಿತ ಕಂಡು 11,313.25ರ ಮಟ್ಟದಲ್ಲಿ ವಹಿವಾಟು ನಡೆಸುತ್ತಿವೆ.