ಮುಂಬೈ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೋವಿಡ್-19 ಸೋಂಕಿತರಾಗಿ ಆರ್ಮಿ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಜಾಗತಿಕ ಸೂಚನೆಗಳ ಮಧ್ಯೆ ಹೂಡಿಕೆದಾರರು ಹಣಕಾಸು ಮತ್ತು ಬ್ಯಾಂಕಿಂಗ್ ವಲಯದ ಷೇರುಗಳತ್ತ ಮುಖಮಾಡಿದರು. ಹೀಗಾಗಿ, ಸತತ ನಾಲ್ಕನೇ ವಹಿವಾಟಿನ ಅವಧಿಯಲ್ಲಿಯೂ ಈಕ್ವಿಟಿ ಮಾನದಂಡಗಳು ಏರಿಕೆ ದಾಖಲಿಸಿದವು.
ಸ್ಥೂಲ ಆರ್ಥಿಕ ದತ್ತಾಂಶ ಉತ್ತೇಜನ ಮತ್ತು ಆರೋಗ್ಯಕರವಾದ 2ನೇ ತ್ರೈಮಾಸಿಕದ ಫಲಿತಾಂಶಗಳ ನಿರೀಕ್ಷೆಯ ಭಾವನೆಯು ಹೂಡಿಕೆದಾರರ ಮನೋಭಾವವನ್ನು ಮತ್ತಷ್ಟು ಹೆಚ್ಚಿಸಿದವು. ತತ್ಪರಿಣಾಮ ಮಂಗಳವಾರದ ವಹಿವಾಟಿನಂದು ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 600.87 ಅಂಕ ಏರಿಕೆಯಾಗಿ 39,574.57 ಅಂಕಗಳ ಮಟ್ಟ ತಲುಪಿದೆ. ಅಂತೆಯೇ, ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಕೂಡ 159.05 ಅಂಕ ಹೆಚ್ಚಳವಾಗಿ 11,662.40 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.
ಕೋವಿಡ್-19 ಸ್ಫೋಟದ ನಂತರ 2020-21ರ 2ನೇ ತ್ರೈಮಾಸಿಕದಲ್ಲಿ ವೈಯಕ್ತಿಕ ಸಾಲ ವಿತರಣೆಯು ವರ್ಷದ ಹಿಂದಿನ ಮಟ್ಟದಲ್ಲಿ ಶೇ.95ಕ್ಕೆ ತಲುಪಿದೆ. ಸೆಪ್ಟೆಂಬರ್‌ನಿಂದ ಪ್ರಬಲ ಚೇತರಿಕೆ ಕಂಡು ಬಂದಿದೆ ಎಂದು ಅಡಮಾನ ಸಾಲಗಾರ ಹೇಳಿದ ಬಳಿಕ, ಹೆಚ್‌ಡಿಎಫ್‌ಸಿ ಷೇರು ಮೌಲ್ಯ ಸೆನ್ಸೆಕ್ಸ್ ವಿಭಾಗದಲ್ಲಿ ಶೇ.8.35ರಷ್ಟು ಏರಿಕೆಯಾಯ್ತು.
ಇಂಡಸ್ಇಂಡ್ ಬ್ಯಾಂಕ್, ಮಹೀಂದ್ರಾ ಅಂಡ್ ಮಹೀಂದ್ರಾ, ಏಷ್ಯನ್ ಪೇಂಟ್ಸ್, ಬಜಾಜ್ ಫೈನಾನ್ಸ್, ಹೆಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಗರಿಷ್ಠ ಲಾಭಗಳಿಸಿದವು.
ಹೆಚ್‌ಡಿಎಫ್‌ಸಿ ಮತ್ತು ಹೆಚ್‌ಡಿಎಫ್‌ಸಿ ಬ್ಯಾಂಕ್ ಸೆನ್ಸೆಕ್ಸ್‌ನ ಅರ್ಧದಷ್ಟು ಲಾಭ ಬಾಚಿದವು. ಮತ್ತೊಂದೆಡೆ, ಟಾಟಾ ಸ್ಟೀಲ್, ನೆಸ್ಲೆ ಇಂಡಿಯಾ, ಲಾರ್ಸೆನ್ ಅಂಡ್ ಟೂಬ್ರೊ, ಸನ್ ಫಾರ್ಮಾ, ಎನ್‌ಟಿಪಿಸಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಶೇ.1.26ಕ್ಕೆ ಕುಸಿದಿವೆ.
ಕೋವಿಡ್-19 ಚಿಕಿತ್ಸೆಯ ನಂತರ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ನಂತರ ಏಷ್ಯಾದ ಷೇರುಗಳು ವಾಲ್‌ಸ್ಟ್ರೀಟ್ ಅನುಸರಿಸಿದವು. ಅಮೆರಿಕದ ನೂತನ ಪ್ರಚೋದಕ ಪ್ಯಾಕೇಜ್ನ ಭರವಸೆ ಕೂಡ ಹೂಡಿಕೆದಾರರ ಮನೋಭಾವವನ್ನು ಹೆಚ್ಚಿಸಿತು.
ಸ್ಥೂಲ ಆರ್ಥಿಕ ದೃಷ್ಟಿಯಿಂದ ಭಾರತದ ಸೇವಾ ವಲಯದ ಉತ್ಪಾದನೆಯು ಸೆಪ್ಟೆಂಬರ್‌ನಲ್ಲಿ ಸ್ಥಿರಗೊಂಡಿದೆ. ಆದರೂ ಸಂಕೋಚನಾ ವಲಯದಲ್ಲಿ ಉಳಿದುಕೊಂಡಿದೆ. ಇಂಡಿಯಾ ಸರ್ವೀಸಸ್ ಬ್ಯುಸಿನೆಸ್ ಆ್ಯಕ್ಟಿವಿಟಿ ಇಂಡೆಕ್ಸ್, ಸೆಪ್ಟೆಂಬರ್‌ನಲ್ಲಿ ಸತತ 5ನೇ ತಿಂಗಳು ಆಗಸ್ಟ್ ಮಾಸಿಕದಲ್ಲಿ 41.8ರಿಂದ 49.8ಕ್ಕೆ ಏರಿಕೆ ಆಗಿದೆ. ವಿತ್ತೀಯ ನೀತಿ ಸಮಿತಿಗೆ ಮೂವರು ನೂತನ ಬಾಹ್ಯ ಸದಸ್ಯರನ್ನು ಸರ್ಕಾರ ನೇಮಿಸಿದ ಬಳಿಕ ಆರ್‌ಬಿಐನ ಹಣಕಾಸು ನೀತಿ ಸಮಿತಿಯ (ಎಂಪಿಸಿ) ತನ್ನ ಮೂರು ದಿನಗಳ ಚರ್ಚಾ ದಿನಾಂಕ ಘೋಷಿಸಿತು.
2021ರ ಹಣಕಾಸು ವರ್ಷದ 2ನೇ ತ್ರೈಮಾಸಿಕ ಫಲಿತಾಂಶಗಳ ನೀರೀಕ್ಷೆಯಲ್ಲಿ ಮಾರುಕಟ್ಟೆ ಹೊಸ ಮಟ್ಟಕ್ಕೆ ಏರುತ್ತಿದೆ. ದೇಶೀಯ ಆರ್ಥಿಕ ದತ್ತಾಂಶದಲ್ಲಿನ ಸ್ಪಷ್ಟ ಸುಧಾರಣೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಏರಿಕೆ ಕಂಡು ಬರುತ್ತಿದೆ. ಮುಂಬರುವ ವಾರಗಳಲ್ಲಿ ಐಟಿ ಮತ್ತು ಬ್ಯಾಂಕಿಂಗ್ ವಲಯವು ಕೇಂದ್ರೀಕೃತವಾಗಿರಲಿದೆ ಎಂಬ ಅಂಶಗಳು ಮಾರುಕಟ್ಟೆ ಮೇಲೆ ಪ್ರಭಾವಿಸಿದವು.
ಬ್ಯಾಂಕ್ಗಳು ಠೇವಣಿ ಮತ್ತು ಮುಂಗಡ ಬೆಳವಣಿಗೆ ಆರೋಗ್ಯಕರ ಪ್ರವೃತ್ತಿ ತೋರಿಸುತ್ತಿವೆ. ಬೆಳವಣಿಗೆಯಲ್ಲಿ ಕೋವಿಡ್ ಪೂರ್ವದ ಮಟ್ಟಕ್ಕೆ ಚೇತರಿಕೆಯ ಲಕ್ಷಣಗಳು ಕಂಡು ಬರುತ್ತವೆ. ಸಾಲ ಮರುಪಾವತಿ ಹಾಗೂ ಚಕ್ರ ಬಡ್ಡಿ ನಿಷೇಧದ ಬಗ್ಗೆ ಮುಂದಿನ ವಾರದ ಸುಪ್ರೀಂಕೋರ್ಟ್ ತೀರ್ಪಿನತ್ತ ಸಕರಾತ್ಮಕ ನಿರೀಕ್ಷೆ ಇರಿಸಿಕೊಳ್ಳಲಾಗಿದೆ ಎಂದು ಜಿಯೋಜಿತ್ ಹಣಕಾಸು ಸೇವೆಗಳ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.