ಮುಂಬೈ: ಜಾಗತಿಕ ಆರ್ಥಿಕತೆಯ ನಿಸ್ತೇಜ ಬೆಳವಣಿಗೆಯನ್ನು ಅನುಸರಿಸಿದ ಮುಂಬೈ ಪೇಟೆಯ ಸೆನ್ಸೆಕ್ಸ್ ಶುಕ್ರವಾರದ ವಹಿವಾಟಿನಲ್ಲಿ ಅಲ್ಪಪ್ರಮಾಣದ ಕುಸಿತ ದಾಖಲಿಸಿದ್ದರೇ ಸಾಲದ ಬಿಕ್ಕಟ್ಟಿನಲ್ಲಿದ್ದ ಸುಜ್ಲಾನ್ ಎನರ್ಜಿ ಲಿಮಿಟೆಡ್ ಷೇರು ಮೌಲ್ಯದಲ್ಲಿ ಹೆಚ್ಚಳ ಕಂಡಿದೆ.
ಎರಡು ದಿನಗಳ ಹಿಂದಷ್ಟೇ ರೇಟಿಂಗ್ ಸಂಸ್ಥೆ ಕೇರ್ ಏಜೆನ್ಸಿಯು ಸುಜ್ಲಾನ್ ಎನರ್ಜಿ ಕೋರಿಕೆ ಮೇರೆಗೆ ಕಂಪನಿಯ ಮೇಲಿದ್ದ ವಾಣಿಜ್ಯ ಕಾಗದದ ವಿವಾದಕ್ಕೆ ಸಂಬಂಧಿತ ತನ್ನ ರೇಟಿಂಗ್ ಅನ್ನು ಹಿಂತೆಗೆದುಕೊಂಡಿದೆ. ಹೀಗಾಗಿ, ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಶೇ 53ರಷ್ಟು ಷೇರು ಮೌಲ್ಯ ಏರಿಕೆ ಆಗಿದೆ. ಇಂದು ಬಿಎಸ್ಇನಲ್ಲಿ ಶೇ 30.93 ಹಾಗೂ ಎನ್ಎಸ್ಇನಲ್ಲಿ ಶೇ 29.21ರಷ್ಟು ಜಿಗಿತ ದಾಖಲಿಸಿ ಹಳೆಯ ಲಯಕ್ಕೆ ಮರಳಿದೆ.
ಪವನ ವಿದ್ಯುತ್ ಉತ್ಪಾದಕ ಸುಜ್ಲಾನ್ ಎನರ್ಜಿ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿತ್ತು. ಸಾಲಪತ್ರಗಳ ಬಿಡುಗಡೆ (ಎಫ್‌ಸಿಸಿಬಿ) ಮೂಲಕ ಬಂಡವಾಳ ಸಂಗ್ರಹಿಸಿ ವಿದೇಶಗಳಲ್ಲಿ ಸ್ವಾಧೀನ ಪ್ರಕ್ರಿಯೆ ನಡೆಸಿತ್ತು.
ಚೀನಾ ಮತ್ತು ಅಮೆರಿಕ ನಡುವಿನ ವಾಣಿಜ್ಯ ಸಮರ ಸಮನಗೊಳಿಸುವ ಮಾತುಕತೆ ಪ್ರಗತಿಯ ಹಂತದಲ್ಲಿ ಇರುವುದರಿಂದ ಜಾಗತಿಕ ಷೇರುಪೇಟೆಗಳಲ್ಲಿನ ಹೂಡಿಕೆದಾರರು ಅದರತ್ತ ದೃಷ್ಟಿನೆಟ್ಟಿದ್ದಾರೆ. ಏಷ್ಯಾ-ಪೆಸಿಫಿಕ್ ಷೇರುಗಳಲ್ಲಿನ ಎಂಎಸ್ಸಿಐ ಸೂಚ್ಯಂಕವು ಶೇ 0.1 ಇಳಿಕೆ ಕಂಡಿದೆ.
ವಾರದ ಕೊನೆಯ ಶುಕ್ರವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 26.87 ಅಂಶಗಳ ಕುಸಿತವಾಗಿ 35,871 ಅಂಕಗಳ ಮಟ್ಟದಲ್ಲೂ ನಿಫ್ಟಿ ಕೇವಲ 1.80 ಅಂಶದ ಅಲ್ಪಏರಿಕೆ ಕಂಡು 10,791 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.
ಗುರುವಾರ ಅಮೆರಿಕ ಫೆಡರಲ್ ಒಪನ್ ಮಾರ್ಕೆಟ್ ಸಮಿತಿಯ ಸಭೆಯ ನಂತರ ಭವಿಷ್ಯದ ಸ್ಟಾಕ್ ದರ ಏರಿಕೆ ಹಾಗೂ ಮಾರುಕಟ್ಟೆಯ ಅನಿಶ್ಚಿತತೆ ಮುನ್ಸೂಚನೆ ಸಿಕ್ಕ ಹಿನ್ನಲ್ಲೆಯಲ್ಲಿ ಡಾಲರ್ ಒತ್ತಡಕ್ಕೆ ಒಳಗಾಯಿತು. ಹೀಗಾಗಿ, ಇಂದು ಡಾಲರ್ ಎದುರು ಭಾರತೀಯ ಕರೆನ್ಸಿ ರೂಪಾಯಿ 9 ಪೈಸೆಗಳ ಅಲ್ಪ ಏರಿಕೆ ದಾಖಲಿಸಿ ಪ್ರತಿ ಡಾಲರ್ಗೆ ₹ 71.16ರಲ್ಲಿ ವಹಿವಾಟು ನಿರತವಾಗಿದೆ.
