ಮುಂಬೈ: ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷದ ತೀವ್ರತೆಯು ಮುಂಬೈ ಷೇರುಪೇಟೆಯ ಮೇಲೂ ಪರಿಣಾಮ ಬೀರಿದೆ. ನಿನ್ನೆ ವಹಿವಾಟಿನ ಅಂತ್ಯಕ್ಕೆ 700 ಅಂಕಗಳಷ್ಟು ನಷ್ಟ ಅನುಭವಿಸಿದ್ದ ಸೆನ್ಸೆಕ್ಸ್ ಇಂದು ಆರಂಭದಲ್ಲಿ 353 ಅಂಕಗಳಷ್ಟು ಏರಿಕೆ ಕಂಡಿದೆ. ಆದರೆ, ಮಧ್ಯಾಹ್ನದ ವೇಳೆಗೆ ಮತ್ತೆ ನಷ್ಟದಲ್ಲಿ ಸಾಗಿದೆ.
ಆರಂಭದಲ್ಲಿ ನಿಫ್ಟಿ 110.45 ಪಾಯಿಂಟ್‌ಗಳು ಏರಿಕೆಯೊಂದಿಗೆ 16,716.40 ಕ್ಕೆ ತಲುಪಿತ್ತು. ಇಂಡಸ್‌ಇಂಡ್ ಬ್ಯಾಂಕ್ ಷೇರುಗಳು ಶೇ. 2ರಷ್ಟು ಏರಿಕೆ ಕಂಡಿದೆ. ಪವರ್‌ಗ್ರಿಡ್, ಎನ್‌ಟಿಪಿಸಿ, ವಿಪ್ರೋ, ಟಾಟಾ ಸ್ಟೀಲ್ ಹಾಗೂ ಟೆಕ್ ಮಹೀಂದ್ರಾ ಲಾಭ ಗಳಿಸಿದ ಇತರೆ ಪ್ರಮುಖ ಕಂಪನಿಗಳಾಗಿವೆ. ಮತ್ತೊಂದೆಡೆ, ಏಷ್ಯನ್ ಪೇಂಟ್ಸ್, ಮಾರುತಿ, ಅಲ್ಟ್ರಾಟೆಕ್ ಸಿಮೆಂಟ್, ನೆಸ್ಲೆ ಇಂಡಿಯಾ ಹಾಗೂ ಟಿಸಿಎಸ್ ಶೇ.1.09 ರವರೆಗೂ ನಷ್ಟವನ್ನು ಅನುಭವಿಸಿದವು.
ನಿನ್ನೆ ವಹಿವಾಟು ಮುಗಿದಾಗ ಸೆನ್ಸೆಕ್ಸ್ 778.38 ಕುಸಿತ ಕಂಡು 55,468.90ಕ್ಕೆ ಕೊನೆಗೊಂಡಿತು. ನಿಫ್ಟಿ 187.95 ಪಾಯಿಂಟ್‌ಗಳ ನಷ್ಟದೊಂದಿಗೆ 16,605.95ಕ್ಕೆ ತಲುಪಿತ್ತು. ಹಾಂಗ್ ಕಾಂಗ್, ಶಾಂಘೈ, ಸಿಯೋಲ್ ಮತ್ತು ಟೋಕಿಯೋ ಷೇರು ಮಾರುಕಟ್ಟೆಗಳಲ್ಲೂ ಮಧ್ಯಮ-ಸೆಷನ್ ವ್ಯವಹಾರಗಳಲ್ಲಿ ಗಮನಾರ್ಹ ಲಾಭಗಳೊಂದಿಗೆ ವಹಿವಾಟು ನಡೆಸುತ್ತಿವೆ.
ಅಂತಾರಾಷ್ಟ್ರೀಯ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಶೇ.2.83 ಏರಿಕೆಯಾಗಿ 116.13 ಡಾಲರ್‌ಗೆ ತಲುಪಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತೀಯ ಮಾರುಕಟ್ಟೆಗಳಲ್ಲಿ ತಮ್ಮ ಮಾರಾಟದ ಅಬ್ಬರವನ್ನು ಮುಂದುವರೆಸಿದ್ದಾರೆ. ನಿನ್ನೆ 4,338.94 ಕೋಟಿ ಮೌಲ್ಯದ ಷೇರುಗಳ ಮಾರಾಟ ಮಾಡಿದ್ದಾರೆ.
ಇತ್ತೀಚಿನ ವರದಿ ಪ್ರಕಾರ ಸೆನ್ಸೆಕ್ಸ್ 143 ಅಂಕಗಳ ಕುಸಿತ ಕಂಡು 55,372 ರಲ್ಲಿ ಹಾಗೂ ನಿಫ್ಟಿ 34 ಅಂಶಗಳ ನಷ್ಟದೊಂದಿಗೆ 16,569ರಲ್ಲಿ ವಹಿವಾಟು ನಡೆಸುತ್ತಿವೆ.
ಇದನ್ನೂ ಓದಿ: ರಷ್ಯಾ-ಉಕ್ರೇನ್ ಸಂಘರ್ಷದ ನಡುವೆ ಚಿನ್ನ, ಬೆಳ್ಳಿ ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ