ಮುಂಬೈ: ದೇಶದ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ಬಿಐ) ಫೆಬ್ರವರಿ 1ರಿಂದ ಉಳಿತಾಯ ಖಾತೆಯ ಠೇವಣಿ ಮತ್ತು ಸ್ಥಿರ ಠೇವಣಿ ಮೇಲಿನ ಬಡ್ಡಿ ದರವನ್ನು ಕಡಿತ ಮಾಡಲಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಲದ ಮೇಲಿನ ಬಡ್ಡಿದರ ಇಳಿಕೆ ಮಾಡಿದ್ದು, ಎಂಸಿಎಲ್ಆರ್ ದರವನ್ನು 5 ಬೇಸಿಸ್ ಪಾಯಿಂಟ್ಗಳಷ್ಟು ತಗ್ಗಿಸಿದೆ. ಇದು ಫೆ.10ರಿಂದ ಜಾರಿಗೆ ಬರಲಿದ್ದು, ಈ ಮೂಲಕ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸತತ ಒಂಬತ್ತು ಬಾರಿ ಎಂಸಿಎಲ್ಆರ್ ದರವನ್ನು ಕಡಿತ ಮಾಡಿದಂತಾಗಿದೆ.
ಎಂಸಿಎಲ್ಆರ್ ದರ ಶೇ 7.90ರಿಂದ ಶೇ 7.85ಕ್ಕೆ ಇಳಿಕೆಯಾಗಲಿದೆ. ಇದರಿಂದಾಗಿ ಬ್ಯಾಂಕ್ನಿಂದ ಗೃಹಸಾಲ ಮತ್ತು ಇತರ ಚಿಲ್ಲರೆ ಸಾಲ ಪಡೆದುಕೊಂಡಿರುವವರಿಗೆ ಬಡ್ಡಿ ದರ ಅಗ್ಗವಾಗಲಿದೆ.
ಎಂಸಿಎಲ್ಆರ್ ಎಂದರೇನು?
ಬ್ಯಾಂಕ್ ಗ್ರಾಹಕರ ಮೇಲೆ ಸಾಲದ ಮೇರೆ ವಿಧಿಸಬಹುದಾದ ಅತ್ಯಂತ ಕಡಿಮೆ ಬಡ್ಡಿ ದರವಾಗಿದ್ದು, ಆರ್ಬಿಐಯ ಅವಕಾಶವಿಲ್ಲದೆ ಇದಕ್ಕಿಂತ ಕಡಿಮೆ ಬಡ್ಡಿದರವನ್ನು ಬ್ಯಾಂಕ್ ವಿಧಿಸುವಂತಿಲ್ಲ. ಬ್ಯಾಂಕ್ ಸ್ವಂತ ವೆಚ್ಚದ ನಿಧಿಯನ್ನು ಆಧರಿಸಿ ಎಂಸಿಎಲ್ಆರ್ ನಿಗದಿಪಡಿಸಲಾಗುತ್ತದೆ. ಗ್ರಾಹಕರ ಈಗಿನ ಗೃಹಸಾಲ ಎಸ್ಬಿಐಯ ಎಂಸಿಎಲ್ಆರ್ ದರದ ಜೊತೆ ಜೋಡಣೆಯಾಗಿದ್ದರೆ ಇಂದಿನ ಇಳಿಕೆಯಿಂದಾಗಿ ಗ್ರಾಹಕರ ಇಎಂಐ ದರ ತಕ್ಷಣವೇ ಇಳಿಕೆ ಆಗುವುದಿಲ್ಲ.