ಸಿಯೋಲ್: ಫೆಬ್ರವರಿ ಮಾಸಿಕದಲ್ಲಿ ಜಾಗತಿಕ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಅಗ್ರ ಸ್ಥಾನ ಪಡೆದುಕೊಂಡಿದೆ. ಗ್ಯಾಲಕ್ಸಿ ಎಸ್ 21 ಸರಣಿಯ ಆರಂಭಿಕ ಬಿಡುಗಡೆಯ ಬಳಿಕ ಆ್ಯಪಲ್ ಅನ್ನು ಹಿಂದಿಕ್ಕಿ ಮುಂದೆ ಸಾಗಿದೆ ಎಂದು ಇತ್ತೀಚಿನ ವರದಿ ತಿಳಿಸಿದೆ.
ಕಳೆದ ತಿಂಗಳು ಶೇ 23.1ರಷ್ಟು ಮಾರುಕಟ್ಟೆ ಪಾಲು ಪಡೆಯಲು ಸ್ಯಾಮ್‌ಸಂಗ್, 24 ಮಿಲಿಯನ್ ಯುನಿಟ್ ಸ್ಮಾರ್ಟ್‌ಫೋನ್‌ಗಳನ್ನು ಸರಬರಾಜು ಮಾಡಿದೆ. ಇನ್ನು ಆ್ಯಪಲ್ 22 ಮಿಲಿಯನ್ (ಶೇ 22.2ರಷ್ಟು ಪಾಲು) ಯುನಿಟ್‌ಗಳನ್ನು ಮಾರಾಟ ಮಾಡಿದೆ ಎಂದು ಮಾರುಕಟ್ಟೆ ಸಂಶೋಧಕ ಸ್ಟ್ರಾಟಜಿ ಅನಾಲಿಟಿಕ್ಸ್ ಹೇಳಿದೆ.
ಚೀನಾದ ಶಿಯೋಮಿ ಶೇ 11.5ರಷ್ಟು ಪಾಲಿನೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ವಿವೊ ಶೇ 10.6ರಷ್ಟು ಮತ್ತು ಒಪ್ಪೊ ಶೇ 8.5 ರಷ್ಟು ಪಾಲು ಹೊಂದಿದೆ. ಜನವರಿಯಲ್ಲಿ ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್ಸಂಗ್ ಮಾರುಕಟ್ಟೆ ಪಾಲು ಶೇ 15.6 ರಷ್ಟಿದ್ದರೆ, ಆ್ಯಪಲ್ ಪಾಲು ಶೇ 25.4ರಷ್ಟಿತ್ತು ಎಂದು ಯೋನ್ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ: ನಮ್ಮ ಪೀಳಿಗೆ ಜತೆ ಸೇರಿ ನಾವು ಮಾಡಿದ್ದ ತಪ್ಪುಗಳನ್ನು ನೀವಾದ್ರೂ ಸರಿಪಡಿಸಿ: ಯುವಕರಿಗೆ ಇಂದ್ರಾ ನೂಯಿ
ಫೆಬ್ರವರಿಯಲ್ಲಿ ಸ್ಯಾಮ್‌ಸಂಗ್‌ನ ಸ್ಮಾರ್ಟ್‌ಫೋನ್ ಮಾರಾಟ ಒಂದು ವರ್ಷದ ಹಿಂದಿನ ಪ್ರಮಾಣಕ್ಕಿಂತ ಶೇ 26ರಷ್ಟು ಹೆಚ್ಚಾಗಿದೆ. 2019ರ ಫೆಬ್ರವರಿಯಲ್ಲಿ ಸಾಂಕ್ರಾಮಿಕ ಪೂರ್ವದ ಮಟ್ಟಕ್ಕಿಂತ ಶೇ 12ರಷ್ಟು ಹೆಚ್ಚಾಗಿದೆ.
ಸ್ಯಾಮ್‌ಸಂಗ್ ಪ್ರತಿ ವರ್ಷ ಫೆಬ್ರವರಿ ಮಧ್ಯದಲ್ಲಿ ಹೊಸ ಗ್ಯಾಲಕ್ಸಿ ಎಸ್ ಸಾಧನ ಪರಿಚಯಿಸುತ್ತಿದೆ. ಆದರೆ ಈ ಬಾರಿ ಕಂಪನಿಯು ತನ್ನ ಹೊಸ ಪ್ರಮುಖ ಗ್ಯಾಲಕ್ಸಿ ಎಸ್ 21 ಸರಣಿ ಜನವರಿಯಲ್ಲಿ ಬಿಡುಗಡೆ ಮಾಡಿತು. ಅಮೆರಿಕ ನಿರ್ಬಂಧಗಳಿಂದ ಸೆಣಸಾಡುತ್ತಿರುವ ಹುವಾವೇ ಮಾರುಕಟ್ಟೆ ಪಾಲು ಸ್ವಾಧೀನಪಡಿಸಿಕೊಳ್ಳಲು ಹಾಗೂ ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ಆ್ಯಪಲ್‌ನ ಐಫೋನ್ 12 ಸರಣಿಗೆ ತೀವ್ರ ಸ್ಪರ್ಧೆಯೊಡ್ಡುತ್ತಿದೆ.
ಫೆಬ್ರವರಿಯಲ್ಲಿ ಸ್ಯಾಮ್‌ಸಂಗ್ ಮತ್ತು ಆ್ಯಪಲ್ ನಡುವಿನ ಮಾರುಕಟ್ಟೆ ಪಾಲು ಅಂತರವು ಸಾಮಾನ್ಯವಾಗಿ 5 ಪ್ರತಿಶತದಷ್ಟು ಇತ್ತು. ಆದರೆ ಅಮೆರಿಕ ಟೆಕ್ ಕಂಪನಿ ಐಫೋನ್ 12 ಸರಣಿಯ ದೃಢವಾದ ಮಾರಾಟದೊಂದಿಗೆ, ಈ ಬಾರಿ ಕೇವಲ ಶೇ 1ರಷ್ಟು ಮಟ್ಟಕ್ಕೆ ಇಳಿದಿದೆ ಎಂದು ಸ್ಟ್ರಾಟಜಿ ಅನಾಲಿಟಿಕ್ಸ್ ಡೇಟಾ ತೋರಿಸಿದೆ.
ಫೆಬ್ರವರಿಯಲ್ಲಿ ಆ್ಯಪಲ್‌ನ ಐಫೋನ್ ಮಾರಾಟವು ಹಿಂದಿನ ವರ್ಷಕ್ಕಿಂತ ಶೇ 74 ರಷ್ಟು ಮತ್ತು ಎರಡು ವರ್ಷಗಳ ಹಿಂದಿಗಿಂತ ಶೇ 35ರಷ್ಟು ಏರಿಕೆಯಾಗಿದೆ.