ಮುಂಬೈ: ಸತತ ಮೂರನೇ ವಹಿವಾಟಿನ ದಿನದಂದು ತನ್ನ ಲಾಭ ಹೆಚ್ಚಿಸಿಕೊಂಡ ರೂಪಾಯಿ, ಅಮೆರಿಕದ ಡಾಲರ್ ಎದುರು ಐದು ತಿಂಗಳ ಗರಿಷ್ಠ ಮಟ್ಟವಾಧ 72.98 ರೂ. ತಲುಪಿದೆ.
ಈಕ್ವಿಟಿ ಮಾರುಕಟ್ಟೆ ಮತ್ತು ನಿರಂತರ ವಿದೇಶಿ ನಿಧಿಯ ಒಳಹರಿವಿನೊಂದಿಗೆ ರೂಪಾಯಿ ಮೌಲ್ಯ ವೃದ್ಧಿಯಾಗಿದೆ. ಇಂಟರ್ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ 2020ರ ಸೆಪ್ಟೆಂಬರ್ 1ರಂದು ಇದ್ದ ದರಕ್ಕೆ ಸಮನಾಗಿದೆ. ಗುರುವಾರದ ವಹಿವಾಟಿನಂದು ಡಾಲರ್ ಮುಂದೆ ರೂಪಾಯಿ 7 ಪೈಸೆಯಷ್ಟು ಹೆಚ್ಚಳವಾಗಿದೆ.
ಅಮೆರಿಕದ ಕರೆನ್ಸಿಯ ವಿರುದ್ಧ ಬುಧವಾರ ರೂಪಾಯಿ 73.05 ರೂ.ಗೆ ಇಳಿದಿತ್ತು. ಆರು ಕರೆನ್ಸಿಗಳ ಬಾಸ್ಕೆಟ್ ವಿರುದ್ಧ ಗ್ರೀನ್‌ಬ್ಯಾಕ್‌ನ ಮಾಪನದಲ್ಲಿ ಡಾಲರ್ ಸೂಚ್ಯಂಕವು ಶೇ 0.18ರಷ್ಟು ಕುಸಿದು 90.31ಕ್ಕೆ ತಲುಪಿದೆ.
ಇದನ್ನೂ ಓದಿ: ಮುಂಬೈ ಪೇಟೆಯಲ್ಲಿ ಸಾರ್ವಕಾಲಿಕ ಗರಿಷ್ಠ ದಾಖಲೆ: ಐತಿಹಾಸಿಕ 50 ಸಾವಿರ ಅಂಕ ದಾಟಿದ ಸೆನ್ಸೆಕ್ಸ್
ದೇಶೀಯ ಈಕ್ವಿಟಿ ಮಾರುಕಟ್ಟೆ ಬೆಳಗಿನ ವಹಿವಾಟಿನಲ್ಲಿ ಬಿಎಸ್ಇ ಸೆನ್ಸೆಕ್ಸ್ 277.80 ಅಂಕ ಅಥವಾ ಶೇ 0.56ರಷ್ಟು ಹೆಚ್ಚಳವಾಗಿ 50,069.92 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ ಕೂಡ 84.35 ಅಂಕ ಹೆಚ್ಚಳವಾಗಿ 14,729.05 ಅಂಕಗಳ ಮಟ್ಟ ತಲುಪಿದೆ.
ವಿನಿಮಯ ದತ್ತಾಂಶಗಳ ಪ್ರಕಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬುಧವಾರ 2,289.05 ಕೋಟಿ ರೂ. ಷೇರು ಖರೀದಿಸಿದ್ದರು. ಬ್ರೆಂಟ್ ಕಚ್ಚಾ ಪ್ಯೂಚರ್ ದರ ಪ್ರತಿ ಬ್ಯಾರೆಲ್‌ಗೆ ಶೇ 0.36ರಷ್ಟು ಏರಿಕೆಯಾಗಿ 55.89 ಡಾಲರ್‌ಗೆ ತಲುಪಿದೆ.