ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಪ್ರಥಮ ಆನ್‌ಲೈನ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ವರ್ಚ್ಯುವಲ್ ತಂತ್ರಜ್ಞಾನದ ಜಿಯೋ 3ಡಿ ಗ್ಲಾಸ್ ಎಂಬ ಹೊಸ ಉತ್ಪನ್ನ ಘೋಷಿಸಿದೆ.
ಹೊಸ ಉತ್ಪನ್ನವು 3ಡಿ ಅವತಾರ, ಹೊಲೊಗ್ರಾಫಿಕ್ ಮತ್ತು ವಿಡಿಯೋ ಕಾನ್ಫರೆನ್ಸಿಂಗ್‌ನಂತಹ ಸಭೆಗಳನ್ನು ಇನ್ನಷ್ಟು ಡಿಜಿಟಲೀಕರಣಗೊಳಿಸಲಿವೆ. ಜಿಯೋ ಗ್ಲಾಸ್ ಕೇವಲ 75 ಗ್ರಾಂ. ತೂಕವಿರುತ್ತದೆ. ಇದರ ಜೊತೆಗೆ ಆಡಿಯೋ ಸಹ ಹೊಂದಿರುತ್ತೆ. ಇದನ್ನು ಸ್ಮಾರ್ಟ್‌ಫೋನ್ ಮೂಲಕವೂ ಬಳಸಬಹುದಾಗಿದೆ. ವರ್ಚ್ಯುವಲ್ ಜಗತ್ತಿನಲ್ಲಿ ಪರಸ್ಪರ ಸಂವಹನ ಕ್ರಿಯೆಗಳನ್ನು ಉತ್ತಮಗೊಳಿಸಲು ಜಿಯೋ ಗ್ಲಾಸ್ 3ಡಿ ಅವತಾರ ಬಳಸಬಹುದು. 3ಡಿ ಹೊಲೊಗ್ರಾಮ್ ಚರ್ಚೆಗಳಿಗೂ ಕಂಪನಿ ಅವಕಾಶ ನೀಡುತ್ತದೆ.
ಹೊಲೊಗ್ರಾಫಿಕ್ :

ಪ್ರೊಜೆಕ್ಟರ್ ನೆರವಿನಿಂದ ಗೋಡೆ, ಗಾಜು ಹಾಗೂ ಬಟ್ಟೆಯ ಪರದೆಗಳ ಮೇಲೆ ಚಿತ್ರಗಳನ್ನು ಬಿಂಬಿಸಿ ಚಿತ್ರಗಳನ್ನು ವೀಕ್ಷಿಸುವುದು ಪ್ರಸ್ತುತ ದಿನಗಳಲ್ಲಿ ಚಾಲ್ತಿಯಲ್ಲಿದೆ. ಆದರೆ, ಹೊಲೊಗ್ರಾಫಿಕ್ ತಂತ್ರಜ್ಞಾನಕ್ಕೆ ಗೋಡೆಯಾಗಲಿ, ಬಟ್ಟೆಯ ಪರದೆಯಾಗಲಿ ಬೇಕಾಗುವುದಿಲ್ಲ. ನಿಗದಿತ ದೂರದಲ್ಲಿ ಗಾಳಿಯಲ್ಲೇ ಚಿತ್ರಗಳು ತೇಲುತ್ತವೆ. ತುಂಬಾ ನೈಜ (ವರ್ಚ್ಯುವಲ್) ರೀತಿಯಲ್ಲಿ ಚಿತ್ರಗಳು ಎಲ್ಲಾ ಮಗ್ಗಲುಗಳಲ್ಲಿ ಕಾಣಿಸಿಕೊಳ್ಳುತ್ತವೆ.
ಕೋಣೆಯೊಂದರ ಮಧ್ಯೆ ನೆಲದ ಮೇಲೆ ಹೊಲೊಗ್ರಾಫಿಕ್ ಟಿವಿಯನ್ನು ಇಟ್ಟರಾಯಿತು. ಅದರಿಂದ ಚಿತ್ರಗಳು ಪ್ರೊಜೆಕ್ಷನ್ ಮೂಲಕ ಹೊರಬಂದು, ನೈಜಲೋಕವನ್ನು ಕಣ್ಮುಂದೆ ಸೃಷ್ಟಿಸುತ್ತವೆ.