ಚೆನ್ನೈ: ತಮಿಳುನಾಡಿನಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಸ್ಟಾಲಿನ್ ನೇತೃತ್ವದ ಸರ್ಕಾರ ಸದ್ಯ ಮುಖ್ಯಮಂತ್ರಿ ಆರ್ಥಿಕ ಸಲಹಾ ಸಮಿತಿ ರಚನೆ ಮಾಡಿದೆ. ಅದರಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಎಸ್ತರ್ ಡುಪ್ಲೊ ಹಾಗೂ ಆರ್ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಸೇರಿದಂತೆ ಪ್ರಮುಖರಿಗೆ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ.
ತಮಿಳುನಾಡಿನಲ್ಲಿ ಆರ್ಥಿಕ ಪುನಶ್ಚೇತನಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಸಮಿತಿ ನೂತನ ಸಿಎಂ ಎಂಕೆ ಸ್ಟಾಲಿನ್ಗೆ ಸಲಹೆ ನೀಡಲಿದ್ದಾರೆ
ಸಲಹಾ ಸಮಿತಿಯಲ್ಲಿ ಯಾರಿಗೆ ಅವಕಾಶ
ನೊಬೆಲ್ ಪ್ರಶಸ್ತಿ ಪುರಸ್ಕೃತೆ ಎಸ್ತರ್ ಡುಫ್ಲೊ, ಆರ್ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್, ಭಾರತ ಸರ್ಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರರಾದ ಅರವಿಂದ್ ಸುಬ್ರಹ್ಮಣಿಯನ್, ಅಭಿವೃದ್ಧಿ ಆರ್ಥಿಕ ತಜ್ಞ ಪ್ರೊಫೆಸರ್ ಜೀನ್ ಡ್ರೀಜ್, ಮಾಜಿ ಕೇಂದ್ರ ಹಣಕಾಸು ಕಾರ್ಯದರ್ಶಿ ಡಾ. ಎಸ್. ನಾರಾಯಣ್ ಇದ್ದಾರೆ.
ಇದನ್ನೂ ಓದಿರಿ: ದೇಶಾದ್ಯಂತ ಒಂದೇ ದಿನ 47 ಲಕ್ಷ ಕೋವಿಡ್ ವ್ಯಾಕ್ಸಿನ್; ಅಭಿನಂದನೆ ಸಲ್ಲಿಸಿದ ನಮೋ
ತಮಿಳುನಾಡಿನಲ್ಲಿ ಇದೀಗ ಎಂ.ಕೆ ಸ್ಟಾಲಿನ್ ನೇತೃತ್ವದ ಹೊಸ ವಿಧಾನಸಭೆ ರಚನೆಯಾಗಿದೆ. ಶಾಸನಸಭೆಯನ್ನುದ್ದೇಶಿಸಿ ಮಾತನಾಡಿರುವ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್, ಈ ಆರ್ಥಿಕ ಸಲಹಾ ಸಮಿತಿ ಬಗ್ಗೆ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಆರ್ಥಿಕ ಪುನಶ್ಚೇತನ ಮಾಡುವ ಉದ್ದೇಶದಿಂದ ಈ ಸಮಿತಿ ರಚನೆ ಮಾಡಲಾಗಿದೆ. ರಘುರಾಮ್ ರಾಜನ್ ಈಗಾಗಲೇ 2013ರಿಂದ 2016ರ ಅವಧಿಯಲ್ಲಿ ಆರ್ಬಿಐ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದು, ಇದಕ್ಕೂ ಮುಂಚಿತವಾಗಿ ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸರ್ಕಾರವಿದ್ದಾಗ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.
ಅರವಿಂದ್ ಸುಬ್ರಹ್ಮಣಿಯನ್ ಅವರು 2014ರಿಂದ 2018ರ ಅವಧಿಯಲ್ಲಿ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರು.