ನವದೆಹಲಿ: ಫಣಿ ಚಂಡಮಾರುತಕ್ಕೆ ತುತ್ತಾದ ಪ್ರದೇಶದ ಜನತೆಗೆ ನೆರವಿಗೆ ಮುಂದಾಗುವಂತೆ ವಾಣಿಜ್ಯ ಹಾಗೂ ಕೈಗಾರಿಕಾ ಒಕ್ಕೂಟಗಳಿಗೆ ಕೇಂದ್ರ ಸಚಿವ ಸುರೇಶ್ ಪ್ರಭು ಮನವಿ ಮಾಡಿದ್ದಾರೆ.
ಒಡಿಶಾ ತೀರದಲ್ಲಿ ಅಪ್ಪಳಿಸಿದ ಭಯಾನಕ ಫಣಿ ಚಂಡಮಾರುತ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದೆ. ಈ ಪ್ರದೇಶಗಳಲ್ಲಿ ಭಾರಿ ಮಳೆ ಬಿದ್ದು, ಸುಮಾರು 11 ಲಕ್ಷ ಜನರ ಜೀವನ ಅಸ್ತವ್ಯಸ್ತವಾಗಿದೆ. ಫಣಿಗೆ ಇದುವರೆಗೂ ಸುಮಾರು 12 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಪರಿಹಾರ ಕಾರ್ಯ ಕ್ಷಿಪ್ರಗತಿಯಲ್ಲಿ ಸಾಗುತ್ತಿದೆ. ಸಂತ್ರಸ್ತರ ನೆರವಿಗೆ ಧಾವಿಸುವಂತೆ ಕೋರಿ ಸುರೇಶ ಪ್ರಭು ಟ್ವೀಟ್ ಮಾಡಿದ್ದಾರೆ.
ಚಂಡಮಾರುತಕ್ಕೆ ತುತ್ತಾದ ಜನರನ್ನು ತಲುಪಿ ಸಹಾಯ ಮಾಡಲು ನಾವು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಸಂಘಟನೆ ನಡೆಸುತ್ತೇವೆ. ಎಲ್ಲ ವಾಣಿಜ್ಯ ಒಕ್ಕೂಟಗಳು ತಕ್ಷಣವೇ ಈ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿ ಕೈಗಾರಿಕೆಗಳ ಒಕ್ಕೂಟ, ಸಿಐಐ, ಫಿಕ್ಕಿ ಹಾಗೂ ಅಸೋಚಾಂಗಳಿಗೆ ಟ್ವೀಟ್‌ನ್ನು ಟ್ಯಾಗ್ ಮಾಡಿದ್ದಾರೆ.