ನವದೆಹಲಿ: ರಾಷ್ಟ್ರವ್ಯಾಪಿ ಲಾಕ್ಡೌನ್ ಬಳಿಕ ಎಲ್‌ಪಿಜಿ ಹೊರತುಪಡಿಸಿ ಎಲ್ಲ ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಶೇ 70ರಷ್ಟು ಕುಸಿದಿದೆ.
ದಿಗ್ಬಂಧನದಿಂದ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡವು. ಪ್ರಯಾಣಿಕ ಸೇರಿದಂತೆ ಕೆಲವು ವಾಹನಗಳ ಓಡಾಟ ಸಂಪೂರ್ಣವಾಗಿ ಬಂದ್ ಆಗಿತ್ತು. ಇದರಿಂದ ಭಾರತದಲ್ಲಿನ ಇಂಧನ ಬಳಕೆಯು ಭಾರೀ ಪ್ರಮಾಣದಲ್ಲಿ ಕುಸಿತವಾಗಿದೆ.
ತಾತ್ಕಾಲಿಕ ಉದ್ಯಮದ ಅಂಕಿ- ಅಂಶಗಳ ಪ್ರಕಾರ, ಏಪ್ರಿಲ್ ಮೊದಲಾರ್ಧದಲ್ಲಿ ಸಾರ್ವಜನಿಕ ವಲಯದ ಸಂಸ್ಥೆಗಳ ಪೆಟ್ರೋಲ್ ಮಾರಾಟವು ಶೇ 64ರಷ್ಟು ಕಡಿಮೆಯಾಗಿದೆ. ಆದರೆ, ತಿಂಗಳ ದ್ವಿತೀಯಾರ್ಧದಲ್ಲಿ ಶೇ 61ರಷ್ಟು ಕುಸಿತದೊಂದಿಗೆ ಕೊನೆಗೊಂಡಿತು. ಅಂತೆಯೇ ಡೀಸೆಲ್ ಮಾರಾಟ ಮೊದಲಾರ್ಧದಲ್ಲಿ ಶೇ 61ರಷ್ಟು ಕುಸಿದರೂ, ತಿಂಗಳಾಂತ್ಯದ ಮಾರಾಟದಲ್ಲಿ ಶೇ 56.5ರಷ್ಟು ಕಡಿಮೆಯಾಗಿದೆ.
ಏಪ್ರಿಲ್‌ನಲ್ಲಿ ಪೆಟ್ರೋಲ್ ಮಾರಾಟವು ಸುಮಾರು 8,70,000 ಟನ್ಗಳಷ್ಟಿತ್ತು. ಇದು ವರ್ಷದ ಹಿಂದಿನ ಇದೇ ತಿಂಗಳಲ್ಲಿ 2.23 ಮಿಲಿಯನ್ ಟನ್ಗಳಷ್ಟು ಕಡಿಮೆಯಾಗಿದೆ. 2019ರ ಏಪ್ರಿಲ್‌ನಲ್ಲಿ ಡೀಸೆಲ್ ಬಳಕೆ 6.56 ಮಿಲಿಯನ್ ಟನ್ನಿಂದ 2.84 ಮಿಲಿಯನ್ ಟನ್ಗೆ ಇಳಿದಿದೆ.
ಬಹುತೇಕ ವಿಮಾನಯಾನ ಸಂಸ್ಥೆಗಳು ಹಾರಾಟ ನಿಲ್ಲಿಸಿದ್ದರಿಂದ ವಿಮಾನ ಟರ್ಬೈನ್ ಇಂಧನ (ಎಟಿಎಫ್) ಬಳಕೆ ಶೇ 91.5ರಷ್ಟು ಕುಸಿಯಿತು.
ಸರ್ಕಾರವು ಬಡವರಿಗೆ ಉಚಿತ ಅಡುಗೆ ಅನಿಲ ಸಿಲಿಂಡರ್ ನೀಡಿದ್ದರಿಂದ ಏಪ್ರಿಲ್‌ನಲ್ಲಿ ಬಳಕೆಯು ಶೇ 12ರಷ್ಟು ಹೆಚ್ಚಳಗೊಂಡು 2.11 ದಶಲಕ್ಷ ಟನ್‌ಗಳಿಗೆ ಏರಿದೆ. ಒಟ್ಟಾರೆಯಾಗಿ ಪೆಟ್ರೋಲಿಯಂ ಉತ್ಪನ್ನ ಮಾರಾಟದಲ್ಲಿನ ಕುಸಿತವು ಶೇ 70ರಷ್ಟಿತ್ತು ಎಂಬುದು ಅಂಕಿ- ಅಂಶಗಳಿಂದ ಸಾಬೀತಾಗಿದೆ.