ನವದೆಹಲಿ : ಸುಡು ಬಿಸಿಲ ಮೇ ತಿಂಗಳಲ್ಲಿ ಇಂಧನ ಬೆಲೆ ಗಗನಕ್ಕೇರಿದ್ದು, ಸತತ ಏರಿಕೆಗಳಿಂದ ಗ್ರಾಹಕರ ಹೃದಯ ಬಡಿತವೂ ಹೆಚ್ಚಾಗಿದೆ.
ಕೆಲವು ನಗರಗಳಲ್ಲಿ ಪೆಟ್ರೋಲ್ ಬೆಲೆಗಳು ಒಂದು ಶತಕದ ಗಡಿ ದಾಟಿದ್ದು, ಜನರು ವಾಹನದಿಂದ ಹಿಂದೆ ಸರಿಯುವಂತೆ ಪ್ರೇರೇಪಿಸಿದೆ. ತೈಲ ಕಂಪನಿಗಳು ಈ ತಿಂಗಳಲ್ಲಿ 16 ಬಾರಿ ಇಂಧನ ಬೆಲೆ ಹೆಚ್ಚಿಸಿವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 4 ರೂ.ಯಷ್ಟು ಹೆಚ್ಚಿಸಲಾಗಿದೆ.
ಮೇ 3ರಿಂದ ದೇಶದಲ್ಲಿ ಇಂಧನ ಬೆಲೆಗಳು ಏರುತ್ತಿವೆ. ಸೋಮವಾರವೂ ತೈಲ ಕಂಪನಿಗಳು ಪೆಟ್ರೋಲ್ ಬೆಲೆಯನ್ನು 28-29 ಪೈಸೆ ಮತ್ತು ಡೀಸೆಲ್ 26-28 ಪೈಸೆ ಹೆಚ್ಚಿಸಿವೆ. ಇದರೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 94.23 ರೂ. ಹಾಗೂ ಡೀಸೆಲ್ 85.15 ರೂ.ಯಲ್ಲಿ ಮಾರಾಟ ಆಗುತ್ತಿದೆ.
ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ ಕಳೆದ ವಾರ ಪೆಟ್ರೋಲ್ ಬೆಲೆ ನೂರರ ಗಡಿ ಮುಟ್ಟಿತ್ತು. ಇಂದು ಇದು 100.47 ರೂ. ತಲುಪಿದೆ. ಡೀಸೆಲ್ ಬೆಲೆ 92.45 ರೂ.ಯಷ್ಟಿದೆ. ಒಟ್ಟಾರೆಯಾಗಿ, ಈ ತಿಂಗಳು ಒಂದು ಲೀಟರ್ ಪೆಟ್ರೋಲ್ ಬೆಲೆ 3.83 ರೂ. ಹಾಗೂ ಡೀಸೆಲ್ ಬೆಲೆ 4.42 ರೂ.ಯಷ್ಟು ಹೆಚ್ಚಿಸಲಾಗಿದೆ.
ವ್ಯಾಟ್ ಮತ್ತು ಸ್ಥಳೀಯ ತೆರಿಗೆಗಳನ್ನು ಅವಲಂಬಿಸಿ ಇಂಧನ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ತೈಲ ಕಂಪನಿಗಳು ಈ ಬೆಲೆಗಳನ್ನು ಪ್ರತಿದಿನವೂ ಅಂತಾರಾಷ್ಟ್ರೀಯ ಬೆಲೆಗಳಿಗೆ ಅನುಗುಣವಾಗಿ ಪರಿಷ್ಕರಿಸುತ್ತವೆ.
ಪ್ರಮುಖ ನಗರಗಳಲ್ಲಿ ಇಂಧನ ಬೆಲೆಗಳು
ದೆಹಲಿ: ಪೆಟ್ರೋಲ್‌ಗೆ ₹ 94.23, ಡೀಸೆಲ್ ₹ 85.15
ಬೆಂಗಳೂರು: ಪೆಟ್ರೋಲ್‌ಗೆ ₹ 97.37, ಡೀಸೆಲ್ ₹ 90.27
ಮುಂಬೈ: ಪೆಟ್ರೋಲ್ ₹ 100.47, ಡೀಸೆಲ್ ₹ 92.45
ಕೋಲ್ಕತ್ತಾ: ಪೆಟ್ರೋಲ್‌ಗೆ ₹ 94.25, ಡೀಸೆಲ್ ₹ 88.00
ಚೆನ್ನೈ: ಪೆಟ್ರೋಲ್ ₹ 95.76, ಡೀಸೆಲ್ ₹ 89.90
ಹೈದರಾಬಾದ್: ಪೆಟ್ರೋಲ್ ₹ 97.93, ಡೀಸೆಲ್ ₹ 92.83