ಅಮರಾವತಿ: ಅನೇಕ ರಾಜ್ಯಗಳಲ್ಲಿ ಈರುಳ್ಳಿ ಬೆಲೆಯು ಕೆ.ಜಿ.ಗೆ ₹ 100ರಿಂದ 150 ನಡುವೆ ಮಾರಾಟ ಆಗುತ್ತಿದೆ. ಆದರೆ, ನೆರೆಯ ಆಂಧ್ರಪ್ರದೇಶದ ರೈತ ಬಜಾರ್ ಮಳಿಗೆಗಳಲ್ಲಿ ಪ್ರತಿ ಕೆ.ಜಿ ಈರುಳ್ಳಿಯು ₹ 25 ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತಿದೆ.
ಮಾರುಕಟ್ಟೆ ಸ್ಥಿರೀಕರಣ ನಿಧಿಯ ಮೂಲಕ ಸಬ್ಸಿಡಿ ನೀಡುವಂತಹ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ್ ರೆಡ್ಡಿ ಅವರು ಈರುಳ್ಳಿ ದಾಸ್ತಾನು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಹೀಗಾಗಿ, ಗ್ರಾಹಕರ ಮತ್ತು ರೈತರ ಹಿತಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜ್ಯ ಸರ್ಕಾರವು ಇಲ್ಲಿಯವರೆಗೆ 25 ಕೋಟಿ ರೂ. ಮೌಲ್ಯದ 35,000 ಕ್ವಿಂಟಾಲ್ ಈರುಳ್ಳಿ ಖರೀದಿಸಿದೆ. ಸೋಲಾಪುರ, ಅಲ್ವಾರ್, ಕರ್ನೂಲ್ ಮತ್ತು ತಡೆಪಲ್ಲಿಗುಡೆಮ್‌ನಿಂದ ₹ 40 ರಿಂದ ₹ 120ರವರ ನಡುವೆ ವ್ಯತ್ಯಾಸವಿದೆ. ಆದರೆ, ಕೆ.ಜಿ ಈರುಳ್ಳಿ ₹ 25ಕ್ಕೆ ಮಾರಾಟವಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಮಳಿಗೆಗಳಾದ ರೈತ ಬಜಾರ್ ಮಾರುಕಟ್ಟೆಗಳಲ್ಲಿ ತರಕಾರಿ, ಹಣ್ಣು, ಆಹಾರ ಧಾನ್ಯಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಸಬ್ಸಿಡಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಕಳೆದ ಎರಡು ದಶಕಗಳಿಂದ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ರೈತ ಬಜಾರ್ ಮಳಿಗೆಗಳು ಭಾರಿ ಜನಪ್ರಿಯವಾಗಿವೆ.
ಸೆಪ್ಟೆಂಬರ್ 27ರಂದು ಆಂಧ್ರಪ್ರದೇಶದಲ್ಲಿ ಈರುಳ್ಳಿ ಕೊರತೆ ಮೊದಲು ಕಾಣಿಸಿಕೊಂಡಿತ್ತು. ಇದರಿಂದ ತಕ್ಷಣವೇ ಎಚ್ಚೆತುಕೊಂಡ ಸರ್ಕಾರವು ಈರುಳ್ಳಿಯನ್ನು ತ್ವರಿತವಾಗಿ ₹ 29 ದರದಲ್ಲಿ ಖರೀದಿಸಿತ್ತು. ರೈತ ಬಜಾರ್‌ಗಳ ಮೂಲಕ ಅಕ್ಟೋಬರ್ 25ರವರೆಗೆ ₹ 25 ದರದಲ್ಲಿ ಮಾರಾಟ ಮಾಡಲಾಯಿತು. ನವೆಂಬರ್ 14ರಿಂದ ಮತ್ತು ಡಿಸೆಂಬರ್ 5ರ ನಡುವೆ ಪ್ರತಿ ಕೆಜಿ ಈರುಳ್ಳಿ ₹ 120 ವರೆಗೆ ಮಾರಾಟ ಆಗಿವೆ.