ನವದೆಹಲಿ: ತೀವ್ರಗತಿಯ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ವಾಹನ ಉದ್ಯಮದ ಸಂಕಷ್ಟ ಹೆಚ್ಚುತ್ತಲೇ ಸಾಗಿದ್ದು, ಎಪ್ರಿಲ್- ಆಗಸ್ಟ್ ಅವಧಿಯಲ್ಲಿ ಪ್ರಮುಖ ಕಂಪನಿಗಳು ಪ್ರಯಾಣಿಕ ವಾಹನದ (ಪಿವಿ) ಮಾರುಕಟ್ಟೆ ಪಾಲು ಬಂಡವಾಳದಲ್ಲಿಯೂ ಇಳಿಕೆ ದಾಖಲಿಸಿವೆ.
ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ (ಎಸ್ಐಎಎಂ) ಅನ್ವಯ, ಟಾಟಾ ಮೋಟಾರ್ಸ್, ಹೋಂಡಾ ಕಾರ್ಸ್, ಫೋರ್ಡ್, ಮಾರುತಿ ಸುಜುಕಿ ಸೇರಿದಂತೆ ಇತರೆ ಪ್ರಮುಖ ಕಂಪನಿಗಳ ಮಾರುಕಟ್ಟೆಯಲ್ಲಿನ ಷೇರುಪಾಲು ಇಳಿಕೆಯಾಗಿದ್ದರೇ ಹುಂಡೈ, ಮಹೀಂದ್ರಾ ಮತ್ತು ಟೊಯೋಟ ಕಂಪನಿಗಳ ಷೇರುಪಾಲು ಏರಿಕೆಯಾಗಿದೆ ಎಂದು ತಿಳಿಸಿದೆ.
ದೇಶದ ಮಾರುತಿ ಸುಜುಕಿ ಇಂಡಿಯಾದ ಪಿವಿ ಮಾರಾಟ 7.57 ಲಕ್ಷದಿಂದ 5.55 ಲಕ್ಷಕ್ಕೆ ಶೇ. 50ರಷ್ಟು ಕುಸಿದಿದೆ. ಇದರಿಂದ ಮಾರುಕಟ್ಟೆ ಪಾಲು ಬಂಡವಾಳದಲ್ಲಿ ಶೇ. 2ರಷ್ಟು ಕ್ಷೀಣಿಸಿದೆ. ಟಾಟಾ ಮೋಟಾರ್ಸ್ ಮಾರಾಟವು 98,702 ರಿಂದ 60,093ಕ್ಕೆ ಇಳಿಕೆಯಾಗಿದೆ.
ಹುಂಡೈ ಮೋಟಾರ್ ಇಂಡಿಯಾ ಕಂಪನಿಯ ಮಾರಾಟ 2.26 ಲಕ್ಷದಿಂದ 2.03 ಲಕ್ಷಕ್ಕೆ ಇಳಿಕೆಯಾಗಿದೆ. ಆದರೂ ಮಾರುಕಟ್ಟೆಯ ಪಾಲು ಶೇ 2.77ರಷ್ಟು ಹೆಚ್ಚಾಗಿದೆ. ಮಹೀಂದ್ರಾ ಕಂಪನಿಯ ಮಾರಾಟ 1 ಲಕ್ಷದಿಂದ 89,733 ಲಕ್ಷಕ್ಕೆ ಇಳಿಕೆಯಾಗಿದ್ದರೂ ಷೇರು ಪಾಲು ಶೇ 1.19ರಷ್ಟು ಹೆಚ್ಚಾಗಿದೆ.