ನವದೆಹಲಿ: ಕೊರೊನಾ ವೈರಸ್ ಅಬ್ಬರದ ನಡುವೆಯೂ ಜುಲೈ ತಿಂಗಳಲ್ಲಿ ಮಹೀಂದ್ರಾ ಟ್ರ್ಯಾಕ್ಟರ್ ಮಾರಾಟದಲ್ಲಿ ಹೆಚ್ಚಳ ಕಂಡುಬಂದಿದೆ.
2019ರ ಜುಲೈ ಅವಧಿಯಲ್ಲಿ ದೇಶಾದ್ಯಂತ 19,174 ಟ್ರ್ಯಾಕ್ಟರ್ ಯನಿಟ್‌ಗಳನ್ನು ಮಾರಾಟ ಮಾಡಿದ್ದ ಮಹೀಂದ್ರಾ ಕಂಪನಿ, ಈ ವರ್ಷದ ಜುಲೈ ಅವಧಿಯಲ್ಲಿ ಒಟ್ಟು 24,463 ಟ್ರ್ಯಾಕ್ಟರ್ಗಳನ್ನು ಮಾರಿದೆ. ಈ ಮೂಲಕ ಶೇ 27ರಷ್ಟು ಮಾರಾಟ ಬೆಳವಣಿಗೆ ದಾಖಲಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಜುಲೈನಲ್ಲಿ ಒಟ್ಟಾರೆ ಟ್ರ್ಯಾಕ್ಟರ್ ಮಾರಾಟವು 25,402 ಯೂನಿಟ್ಗಳಷ್ಟಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 19,992 ಯೂನಿಟ್ಗಳು ಮಾರಾಟ ಆಗಿದ್ದವು. ಮಾರಾಟ ಬೆಳವಣಿಗೆಯು ಶೇ 27ರಷ್ಟಿದೆ. ಸಾಗರೋತ್ತರ ರಫ್ತು ಸಹ ಶೇ 15ರಷ್ಟು ಏರಿಕೆಯಾಗಿದ್ದು, ಕಳೆದ ವರ್ಷದ 818 ಯೂನಿಟ್ ಎದುರು 939 ಟ್ರ್ಯಾಕ್ಟರ್ ಮಾರಾಟ ಆಗಿವೆ ಎಂದು ಹೇಳಿದೆ.
ಜುಲೈ ತಿಂಗಳಲ್ಲಿ ಇದು ನಮ್ಮ ಅತ್ಯಧಿಕ ಮಾರಾಟವಾಗಿದೆ. ರೈತರಿಗೆ ಉತ್ತಮ ಹಣದ ಹರಿವು ಬರುತ್ತಿದೆ. ಹೆಚ್ಚಿದ ಖಾರೀಫ್ ಬಿತ್ತನೆ, ಸಾಮಾನ್ಯ ಮಾನ್ಸೂನ್ ಮಳೆ, ಜೂನ್ ಮತ್ತು ಜುಲೈನಲ್ಲಿ ಹೆಚ್ಚಿದ ಗ್ರಾಮೀಣ ಚಟುವಟಿಕೆಗಳಿಂದ ಕೃಷಿಕರಲ್ಲಿ ಧನಾತ್ಮಕ ಭಾವನೆಗಳು ಮೂಡಿವೆ. ಇದರಿಂದ ಟ್ರ್ಯಾಕ್ಟರ್ಗಳ ಬೇಡಿಕೆಯಲ್ಲಿ ಹೆಚ್ಚಳ ಕಂಡುಬಂದಿದೆ ಎಂ&ಎಂನ ಕೃಷಿ ಸಲಕರಣೆ ವಲಯದ ಅಧ್ಯಕ್ಷ ಹೇಮಂತ್ ಸಿಕ್ಕಾ ಹೇಳಿದರು.