ನವದೆಹಲಿ: ಭಾರಿ ಬೆಲೆ ಏರಿಕೆಯ ಹೊರತಾಗಿಯೂ ಕಳೆದ ಮೂರು ತಿಂಗಳಲ್ಲಿ ಅಡುಗೆ ಅನಿಲ ಎಲ್‌ಪಿಜಿ ಬಳಕೆ ಶೇ 7.3ರಷ್ಟು ಏರಿಕೆಯಾಗಿದೆ. ಪಿಎಂಯುವೈ ಗ್ರಾಮೀಣ ಬಡ ಫಲಾನುಭವಿಗಳ ಬಳಕೆ ಸಹ ಶೇ 20ರಷ್ಟಿದೆ ಎಂದು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ತಿಳಿಸಿವೆ.
ಪಿಎಂಯುವೈ ಗ್ರಾಹಕರಲ್ಲಿ ಎಲ್‌ಪಿಜಿ ಬಳಕೆ ಸುಧಾರಿಸಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಪ್ರಕಟಣೆಯಲ್ಲಿ ತಿಳಿಸಿದೆ.
2020ರ ಡಿಸೆಂಬರ್ ಮತ್ತು 2021ರ ಫೆಬ್ರವರಿ ನಡುವೆ ಅಡುಗೆ ಅನಿಲ ಬಳಕೆಯು ಹೆಚ್ಚಾಗಿ ಎಲ್ಲಾ ವಿಭಾಗಗಳಲ್ಲೂ 175 ರೂ.ಯಷ್ಟು ಏರಿಕೆ ಕಂಡಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಫಲಾನುಭವಿಗಳಲ್ಲಿ ಶೇ 19.5ರಷ್ಟು ಏರಿಕೆಯಾಗಿದೆ. 8 ಕೋಟಿಗೂ ಅಧಿಕ ಬಡ ಕುಟುಂಬಗಳು 2016ರಿಂದ ಉಚಿತ ಸಂಪರ್ಕ ಪಡೆದುಕೊಂಡಿವೆ.
ಖಾಸಗೀಕರಣಕ್ಕೆ ಒಳಪಟ್ಟ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಕೂಡ ಇದೇ ರೀತಿಯ ಹೇಳಿಕೆ ನೀಡಿದೆ. ಸಾಮಾನ್ಯ ಜನರ ಮೇಲೆ ಇಂಧನ ದರ ಏರಿಕೆ ಪರಿಣಾಮ ಬೀರುತ್ತಿದೆ ಎಂದು ಕಾಂಗ್ರೆಸ್ ಮತ್ತು ಟಿಎಂಸಿಯಂತಹ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ನಡುವೆ ಈ ಹೇಳಿಕೆಗಳು ಹೊರಬಂದಿವೆ.
ಕೆಲವು ಪಿಎಂಯುವೈ ಫಲಾನುಭವಿಗಳು ಬೆಲೆ ಏರಿಕೆಯ ನಂತರ ಎಲ್‌ಪಿಜಿ ಖರೀದಿಸುವುದನ್ನು ತ್ಯಜಿಸಿದ್ದಾರೆ ಎಂದು ವರದಿಗಳು ಹೇಳಿವೆ.
7 ವರ್ಷಗಳ ಹಿಂದೆ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಅಡುಗೆ ಅನಿಲ ಬೆಲೆ ದ್ವಿಗುಣಗೊಂಡಿದೆ ಎಂದು ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಈ ವಾರದ ಆರಂಭದಲ್ಲಿ ಲೋಕಸಭೆಯಲ್ಲಿ ತಿಳಿಸಿದ್ದರು. 2014ರ ಮಾರ್ಚ್ 1ರಂದು ದೇಶೀಯ ಅನಿಲದ ಚಿಲ್ಲರೆ ಮಾರಾಟದ ಬೆಲೆ 14.2 ಕೆ.ಜಿ. ಸಿಲಿಂಡರ್‌ಗೆ 410.5 ರೂ.ಯಷ್ಟಿತ್ತು.
ಇದನ್ನೂ ಓದಿ: ಗಡಿ ಜಟಾಪಟಿ ನಡುವೆಯೇ ಬ್ರಹ್ಮಪುತ್ರ ನದಿಗೆ ಅಣೆಕಟ್ಟೆ ಕಟ್ಟಲು ಚೀನಾ ಸಿದ್ಧತೆ!
ಪ್ರಸಕ್ತ ಹಣಕಾಸು ವರ್ಷದ ಆರಂಭಿಕ ತ್ರೈಮಾಸಿಕದಲ್ಲಿ ಎಲ್‌ಪಿಜಿ ಬಳಕೆಯಲ್ಲಿ ಒಟ್ಟಾರೆ ಶೇ 23.2ರಷ್ಟು ಏರಿಕೆ ಕಂಡುಬಂದಿದೆ. ಪಿಒಎಂಯುವೈ ಫಲಾನುಭವಿಗಳಿಗೆ ಕೋವಿಡ್ -19 ಲಾಕ್‌ಡೌನ್‌ನ ಸಮಸ್ಯೆ ಎದುರಿಸಲು ಉಚಿತ ಸಿಲಿಂಡರ್‌ಗಳ ಕಾರಣದಿಂದಾಗಿ ಏರಿಕೆಯಾಗಿದೆ. ಅಡುಗೆ ಅನಿಲ ಬೇಡಿಕೆ ಡಿಸೆಂಬರ್‌ನಲ್ಲಿ ಸುಧಾರಿಸುತ್ತಲೇ ಇತ್ತು. ವರ್ಷದ ಫೆಬ್ರವರಿಯಿಂದ ಶೇ 7.3ರಷ್ಟು ಬೆಳವಣಿಗೆ ಹೊಂದಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.