ನವದೆಹಲಿ: 2021ರ ಹೊಸ ವರ್ಷದಿಂದ ಡಿಜಿಟಲ್ ಸೇವೆಗಳ ಶುಲ್ಕ, ವಾಹನ ದರ ಏರಿಕೆಯ ಬೆನ್ನಲ್ಲೇ ಗೃಹ ಬಳಕೆಯ ಕೆಲವು ವಸ್ತುಗಳ ದರ ಏರಿಕೆ ಆಗಲಿದೆ.
ಎಲ್ಇಡಿ ಟಿವಿ, ರೆಫ್ರಿಜರೇಟರ್, ವಾಷಿಂಗ್ ಮಷಿನ್ ಬೆಲೆಯು ಜನವರಿಯಿಂದ ಸರಿಸುಮಾರು ಶೇ. 10ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಇವುಗಳ ತಯಾರಿಕೆಯಲ್ಲಿ ಬಳಕೆಯಾಗುವ ಕಚ್ಚಾ ಸರಕುಗಳ ಬೆಲೆ ಹಾಗೂ ಸಾಗಣೆ ವೆಚ್ಚದಲ್ಲಿ ಆಗಿರುವ ಏರಿಕೆಯ ಪರಿಣಾಮ ಅದರ ನೇರ ಹೊರೆ ಗ್ರಾಹಕರ ಮೇಲೆ ಬೀಳುತ್ತಿದೆ.
ತಾಮ್ರ, ಅಲ್ಯೂಮಿನಿಯಂ ಮತ್ತು ಉಕ್ಕಿನಂತಹ ಇನ್‌ಪುಟ್ ವಸ್ತುಗಳ ಬೆಲೆ ಮತ್ತು ಸಾಗಾಟ ಸರಕುಗಳ ಬೆಲೆ ಹೆಚ್ಚಳವಾಗಲಿದೆ. ಇದರ ಜೊತೆಗೆ ಜಾಗತಿಕ ಮಾರಾಟಗಾರರ ಕೊರತೆಯಿಂದಾಗಿ ಟಿವಿ ಪ್ಯಾನೆಲ್‌ಗಳ (ಒಪೆನ್ಸೆಲ್) ಬೆಲೆಗಳು ದ್ವಿಗುಣಗೊಂಡಿದೆ. ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ಪ್ಲಾಸ್ಟಿಕ್ ಬೆಲೆಯೂ ಆಕಾಶ ಮುಖವಾಗಿದೆ. ಹೀಗಾಗಿ ಮುಂದಿನ ವರ್ಷದಿಂದ ಶೇ. 10ರಷ್ಟು ದರ ಏರಿಕೆ ಆಗಲಿದೆ ಎಂದು ತಯಾರಕರು ತಿಳಿಸಿದ್ದಾರೆ.
ಇದನ್ನೂ ಓದಿ: ಫೇಸ್ಬುಕ್ನೊಂದಿಗೆ ಟಿಪ್ಸ್ ಮ್ಯೂಸಿಕ್ ಕಂಪನಿ ಒಪ್ಪಂದ
ತಯಾರಿಕ ವೆಚ್ಚದ ಏರಿಕೆಗೆ ಅನಿವಾರ್ಯವಾಗಿ ಎಲ್ಜಿ, ಪ್ಯಾನಾಸೋನಿಕ್ ಮತ್ತು ಥಾಮ್ಸನ್ನಂತಹ ತಯಾರಕರು ಜನವರಿಯಿಂದ ಬೆಲೆಗಳನ್ನು ಹೆಚ್ಚಿಸಲಿದ್ದಾರೆ. ಸೋನಿ ಇನ್ನೂ ಈ ಬಗ್ಗೆ ಪರಿಸ್ಥಿತಿಯನ್ನು ಕಾದು ನೋಡುವ ತಂತ್ರದ ಮೊರೆ ಹೋಗಿದೆ.
ಸರಕು ಬೆಲೆಗಳ ಹೆಚ್ಚಳವು ಮುಂದಿನ ದಿನಗಳಲ್ಲಿ ನಮ್ಮ ಉತ್ಪನ್ನದ ಬೆಲೆಯ ಮೇಲೆ ಪರಿಣಾಮ ಬೀರಲಿದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಜನವರಿಯಲ್ಲಿಯೇ ಬೆಲೆಗಳು ಶೇ. 6-7ರಷ್ಟು ಹೆಚ್ಚಾಗಲಿವೆ. ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಅಂತ್ಯದ ವೇಳೆಗೆ ಶೇ. 10-11ರವರೆಗೆ ಏರಿಕೆಯಾಗಬಹುದು ಎಂದು ಪ್ಯಾನಸೋನಿಕ್ ಇಂಡಿಯಾ ಅಧ್ಯಕ್ಷ & ಸಿಇಒ ಮನೀಶ್ ಶರ್ಮಾ ಹೇಳಿದರು.