ನವದೆಹಲಿ: ವಿಮಾನಯಾನ ಸಂಸ್ಥೆ ಜೆಟ್ ಏರ್‌ವೇಸ್ 2022ರ ಮೊದಲ ತ್ರೈಮಾಸಿಕದಲ್ಲಿ ದೇಶೀಯ ವಿಮಾನ ಸೇವೆಯನ್ನು ಪುನರಾರಂಭಿಸುತ್ತದೆ. ಮುಂದಿನ ವರ್ಷದ ಕೊನೆಯ ತ್ರೈಮಾಸಿಕದಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಆರಂಭವಾಗಲಿದೆ ಎಂದು ಜಲನ್ ಕಲ್ರಾಕ್ ಒಕ್ಕೂಟ ತಿಳಿಸಿದೆ.
ವಿಮಾನ ಸೇವೆ ಪುನಾರಂಭಿಸಲು ಈಗಾಗಲೇ ಏರ್ ಆಪರೇಟರ್ ಸರ್ಟಿಫಿಕೇಟ್ (ಎಒಸಿ) ಮರುಮೌಲ್ಯಮಾಪನ ಪ್ರಕ್ರಿಯೆಯೂ ನಡೆಯುತ್ತಿದೆ. ಸ್ಲಾಟ್ ಹಂಚಿಕೆ, ಅಗತ್ಯವಿರುವ ವಿಮಾನ ನಿಲ್ದಾಣ ಮೂಲಸೌಕರ್ಯ ಹಾಗೂ ರಾತ್ರಿ ಪಾರ್ಕಿಂಗ್ ಕುರಿತು ಒಕ್ಕೂಟವು ಸಂಬಂಧಿತ ಅಧಿಕಾರಿಗಳು ಮತ್ತು ವಿಮಾನ ನಿಲ್ದಾಣದ ಸಂಯೋಜಕರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಜಲನ್ ಕಲ್ರಾಕ್ ಒಕ್ಕೂಟದ ಪ್ರಮುಖ ಸದಸ್ಯ ಮುರಾರಿ ಲಾಲ್ ಜಲನ್ ಮಾಹಿತಿ ನೀಡಿದ್ದಾರೆ.
ಜೆಟ್ ಏರ್‌ವೇಸ್ 2.0 ದೇಶೀಯ ಕಾರ್ಯಾಚರಣೆಗಳನ್ನು 2022ರ ಮೊದಲ ತ್ರೈಮಾಸಿಕದೊಳಗೆ ಮರುಪ್ರಾರಂಭಿಸುವ ಗುರಿ ಹೊಂದಿದೆ. 2022ರ 3ನೇ ಹಾಗೂ ನಾಲ್ಕನೇ ತ್ರೈಮಾಸಿಕ ವೇಳೆಗೆ ಅಂತಾರಾಷ್ಟ್ರೀಯ ಸೇವೆಯನ್ನು ಆರಂಭಿಸುತ್ತದೆ ಎಂದು ಹೇಳಿದ್ದಾರೆ.
ನಮ್ಮ ಯೋಜನೆಯು ಮೂರು ವರ್ಷಗಳಲ್ಲಿ 50ಕ್ಕೂ ಹೆಚ್ಚು ಹಾಗೂ ಐದು ವರ್ಷಗಳಲ್ಲಿ 100ಕ್ಕೂ ಅಧಿಕ ವಿಮಾನಗಳನ್ನು ಹೊಂದಿದ್ದು, ಇದು ಒಕ್ಕೂಟದ ಅಲ್ಪಾವಧಿಯ ಮತ್ತು ದೀರ್ಘಕಾಲೀನ ವ್ಯಾಪಾರ ಯೋಜನೆಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ವಾಯುಯಾನದ ಇತಿಹಾಸದಲ್ಲಿ ಮೊದಲ ಬಾರಿಗೆ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಸ್ಥಗಿತವಾಗಿದ್ದ ವಿಮಾನಯಾನ ಸಂಸ್ಥೆಯನ್ನು ಪುನಾರಂಭ ಮಾಡುತ್ತಿದ್ದು, ಈ ಐತಿಹಾಸಿಕ ಪ್ರಯಾಣದ ಭಾಗವಾಗಲು ನಾವು ಎದುರು ನೋಡುತ್ತಿದ್ದೇವೆ ಮುರಾರಿ ಲಾಲ್ ಜಲನ್ ಹೇಳಿದ್ದಾರೆ.
ಇದನ್ನೂ ಓದಿ: ಹೈದರಾಬಾದ್‌ನಿಂದ ಲಂಡನ್‌ಗೆ ತಡೆರಹಿತ ನೇರ ವಿಮಾನ ಸೇವೆ ಆರಂಭಿಸಿದ ಏರ್ ಇಂಡಿಯಾ