ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಮಧ್ಯೆ ಹೂಡಿಕೆದಾರರ ಭಾವನೆಗಳೂ ಕರಗಿದೆ. ಈಕ್ವಿಟಿ ಮಾರುಕಟ್ಟೆಯ ಭಾರಿ ನಷ್ಟದಿಂದಾಗಿ ಹೂಡಿಕೆದಾರರ ಸಂಪತ್ತು ಸೋಮವಾರ ಬೆಳಗ್ಗೆ 6,86,708.74 ಕೋಟಿ ರೂ.ಯಷ್ಟು ಮಾಯವಾಗಿದೆ.
30 ಷೇರುಗಳ ಬಿಎಸ್‌ಇ ಮಾನದಂಡ ಸೂಚ್ಯಂಕ ಬೆಳಗ್ಗಿನ ವಹಿವಾಟಿನಲ್ಲಿ 1,479.15 ಅಂಕ ಕುಸಿತ ಕಂಡು 48,112.17 ಅಂಕಗಳಿಗೆ ತಲುಪಿದೆ. ಬಿಎಸ್‌ಇ ಪಟ್ಟಿಮಾಡಿದ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣವು 6,86,708.74 ಕೋಟಿ ರೂ.ಯಿಂದ 2,02,76,533.13 ಕೋಟಿ ರೂ.ಗೆ ಇಳಿದಿದೆ.
ಇದನ್ನೂ ಓದಿ: ದೇಶಾದ್ಯಂತ ಕೊರೊನಾರ್ಭಟಕ್ಕೆ ಷೇರು ಮಾರುಕಟ್ಟೆ ತಲ್ಲಣ; ಸೆನ್ಸೆಕ್ಸ್ 1,166.95 ಅಂಕ ಕುಸಿತ
30 ಷೇರುಗಳ ಕಂಪನಿಗಳ ಪೈಕಿ ಇಂಡಸ್ಇಂಡ್ ಬ್ಯಾಂಕ್ ಅತಿ ಹೆಚ್ಚುನಷ್ಟ ಅನುಭವಿಸಿದ್ದು, ಶೇ 7ಕ್ಕಿಂತಲೂ ಹೆಚ್ಚು ಕುಸಿದಿದೆ. ಎಸ್‌ಬಿಐ, ಬಜಾಜ್ ಫೈನಾನ್ಸ್ ಮತ್ತು ಆಕ್ಸಿಸ್ ಬ್ಯಾಂಕ್ ನಂತರದ ಸ್ಥಾನದಲ್ಲಿದೆ.
ದೇಶೀಯ ಷೇರುಗಳು ಕೊರೊನಾ ಸೋಂಕಿನ ಸಮಯದಲ್ಲಿ ಸ್ಫೂರ್ತಿದಾಯಕವಾಗಿ ಕಾಣುತ್ತಿಲ್ಲ.
ದೇಶದಲ್ಲಿ ಕೋವಿಡ್-19 ಕೇಸ್ಗಳು ದಿನದಿಂದ ದಿನಕ್ಕೆ ತೀವ್ರವಾಗಿ ಏರಿಕೆ ಆಗುತ್ತಿವೆ. ದೊಡ್ಡ ಆರ್ಥಿಕ ನಿರ್ಬಂಧಗಳ ಸಾಧ್ಯತೆಯು ಹೂಡಿಕೆದಾರರನ್ನು ಸದ್ಯದಲ್ಲಿಯೇ ತಲ್ಲಣಗೊಳಿಸುವ ನಿರೀಕ್ಷೆಯಿದೆ. ಇದಲ್ಲದೆ, ಮಹಾರಾಷ್ಟ್ರದಂತಹ ದೊಡ್ಡ ರಾಜ್ಯದಲ್ಲಿ ಲಾಕ್‌ಡೌನ್ ಆಗುವ ಸಾಧ್ಯತೆ ಹೂಡಿಕೆದಾರರ ಮನೋಭಾವಕ್ಕೆ ಪೆಟ್ಟು ನೀಡಿದೆ.