ನವದೆಹಲಿ: ಮಧ್ಯಪ್ರಾಚ್ಯದಲ್ಲಿನ ಭೌಗೋಳಿಕ ರಾಜಕೀಯ ಪ್ರಕ್ಷುಬ್ಧತೆಯಿಂದ ಉಂಟಾದ ಕಚ್ಚಾ ತೈಲ ದರ ಏರಿಕೆ ಭೀತಿಯು ಎರಡೇ ದಿನದಲ್ಲಿ ಭಾರತೀಯ ಹೂಡಿಕೆದಾರರ ₹ 2.72 ಲಕ್ಷ ಕೋಟಿ ಸಂಪತ್ತು ಕರಗಿದೆ.
ವಿಶ್ವದಲ್ಲಿ ಅತಿ ಹೆಚ್ಚು ತೈಲ ರಫ್ತು ಮಾಡುವ ಸೌದಿ ಅರೇಬಿಯಾದ ಅರಾಮ್ಕೋ ತೈಲ ಘಟಕಗಳ ಮೇಲೆ ಡ್ರೋನ್ ದಾಳಿ ನಡೆದಿರುವುದರಿಂದಾಗಿ ಬ್ರೆಂಟ್ ಕಚ್ಚಾ ಇಂಧನ ಬೆಲೆ ಏರಿಕೆ ಆಗಲಿದೆ. ಭಾರತ ಸಹಿತ ಹಲವು ರಾಷ್ಟ್ರಗಳಿಗೆ ತೈಲ ಕೊರತೆ ಆತಂಕ ಕಾಡಿದ್ದು, ದಾಳಿಯ ಪರಿಣಾಮ ಜಾಗತಿಕ ಷೇರು ಪೇಟೆಗಳ ಮೇಲೂ ಬೀರಿದೆ.
ಬಿಎಸ್ಇ ಸೂಚ್ಯಂಕ ಮಂಗಳವಾರ ಒಂದೇ ದಿನ 642.22 ಅಂಶಗಳು ಅಥವಾ ಶೇ 1.73 ರಷ್ಟು ಕುಸಿತ ದಾಖಲಿಸಿ 36,481.09 ಅಂಶಗಳಿಗೆ ತಲುಪಿದೆ. ಮಧ್ಯಾಂತರ ವಹಿವಾಟಿನಲ್ಲಿ ಸೆನ್ಸೆಕ್ಸ್ 704.22 ಅಂಶಗಳವರೆಗೂ ಇಳಿಕೆ ಕಂಡಿದೆ. ಸೋಮವಾರದ ವಹಿವಾಟಿನಲ್ಲಿಯೂ ಸೆನ್ಸೆಕ್ಸ್ 262 ಅಂಶಗಳ ಇಳಿಕೆ ದಾಖಲಿಸಿತ್ತು. ಇಂದು ಮಾರಾಟದ ಒತ್ತಡಕ್ಕೆ ಸಿಲುಕಿದ ಷೇರುಗಳು ಬಿಎಸ್ಇನ ಮಾರುಕಟ್ಟೆ ಬಂಡವಾಳ ಕಂಪನಿಗಳ ಸಂಪತ್ತು ₹ 2,72,593.54 ಕೋಟಿಯಿಂದ 1,39,70.356.22 ಕೋಟಿಗೆ ತಲುಪಿದೆ.
ಸತತ ಎರಡನೇ ದಿನದ ಅತಿರೇಕದ ಷೇರುಗಳ ಮಾರಾಟದ ಒತ್ತಡವು ಈ ಹಿಂದಿನ ವಾರದ ಲಾಭದ ಸಂಪೂರ್ಣ ಸವೆತಕ್ಕೆ ಕಾರಣವಾಯಿತು. ಸೌದಿ ಅರೇಬಿಯಾ ತೈಲ ಘಟಕಗಳ ಮೇಲೆ ಡ್ರೋನ್ ದಾಳಿಯಿಂದಾಗಿ ತೈಲ ಬೆಲೆಗಳು ಏಕಾಏಕಿ ಏರಿಕೆ ಕಂಡಿದೆ. ಇದು ಚಾಲ್ತಿ ಖಾತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಹಣಕಾಸಿನ ಕೊರತೆಯು ಈಗಾಗಲೇ ಮಂದಗತಿಯಲ್ಲಿ ಮುಳುಗಿರುವ ಆರ್ಥಿಕತೆಯ ಚೇತರಿಕೆಯ ಹಾದಿಯನ್ನು ತಪ್ಪಿಸಲಿದೆ ಎಂದು ಸೆಂಟ್ರಮ್ ಬ್ರೋಕಿಂಗ್ ಸಿಇಒ ನಿಶ್ಚಲ್ ಮಹೇಶ್ವರಿ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರದಂದು ಪ್ರತಿ ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲದ ಮೇಲೆ ಶೇ 20ರಷ್ಟು ಏರಿಕೆಯಾಗಿ 71.95 ಡಾಲರ್ಗೆ ತಲುಪಿತ್ತು. ಮಂಗಳವಾರ ಅಲ್ಪ ಇಳಿಕೆ ದಾಖಲಿಸಿದ ತೈಲವು, ಪ್ರತಿ ಬ್ಯಾರಲ್ 67.97 ಡಾಲರ್ಗೆ ಕ್ಷೀಣಿಸಿದೆ.