ಮುಂಬೈ: ಇಂಡಿಯನ್ ಬ್ಯಾಂಕ್ ರೈತರಿಗೆ ನೀಡುವ ಚಿನ್ನದ ಸಾಲದ ಮೇಲಿನ ಬಡ್ಡಿದರವನ್ನು ಶೇ 7ಕ್ಕೆ ಇಳಿಸಿದೆ.
ಸರ್ಕಾರಿ ಸ್ವಾಮ್ಯದ ಬ್ಯಾಂಕ್, ತನ್ನ ಅಲ್ಪಾವಧಿಯ ಚಿನ್ನದ ಸಾಲ ಯೋಜನೆಯ ಬಂಪರ್ ಅಗ್ರಿ ಜ್ಯುವೆಲ್ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡಿದೆ. ಈ ಮೊದಲು ಬಡ್ಡಿದರ ಶೇ 7.5ರಷ್ಟಿತ್ತು.
ಪ್ರಸ್ತುತ ಸಾಂಕ್ರಾಮಿಕ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಪರಿಗಣಿಸಿ ಬಡ್ಡಿದರ ಕಡಿತ ಮಾಡಲಾಗಿದೆ. ಅಗತ್ಯವಿರುವ ರೈತರಿಗೆ ಅಗ್ಗದ ವೆಚ್ಚದಲ್ಲಿ ಸುಲಭವಾಗಿ ಸಾಲ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
2020ರ ಜುಲೈ 22ರಿಂದ ಜಾರಿಗೆ ಬರುವಂತೆ ಕೃಷಿ ಚಿನ್ನಾಭರಣ ಸಾಲದ ಬಡ್ಡಿದರ ಶೇ 7ಕ್ಕೆ ನಿಗದಿಪಡಿಸಲಾಗಿದೆ. ಇದು ತಿಂಗಳಿಗೆ ಒಂದು ಲಕ್ಷಕ್ಕೆ 583 ರೂ.ಯಷ್ಟು ಉಳಿತಾಯ ಆಗಲಿದೆ ಎಂದು ಬ್ಯಾಂಕ್ ತಿಳಿಸಿದೆ.
ಬಂಪರ್ ಅಗ್ರಿ ಜ್ಯುವೆಲ್ ಸಾಲ ಯೋಜನೆಯಡಿ ಬ್ಯಾಂಕ್ ಆಭರಣ ಮೌಲ್ಯದಡಿ ಶೇ 85ರಷ್ಟು ಸಾಲವಾಗಿ ನೀಡುತ್ತಿದೆ. ಸಾಲವನ್ನು ಆರು ತಿಂಗಳಲ್ಲಿ ಮರುಪಾವತಿಸಲಾಗುತ್ತದೆ.