ನವದೆಹಲಿ : ಇಂಧನಗಳ ಮೇಲಿನ ಅಬಕಾರಿ ಸುಂಕವನ್ನು ಗರಿಷ್ಠ ಪ್ರಮಾಣದಲ್ಲಿ ಏರಿಕೆ ಮಾಡಿರುವುದರಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರದ ಖಜಾನೆಗೆ 1.6 ಲಕ್ಷ ಕೋಟಿ ರೂ. ಮೊತ್ತದಷ್ಟು ಹೆಚ್ಚುವರಿ ಸಂಪನ್ಮೂಲ ಹರಿದು ಬರಲಿದೆ.
ಲಾಕ್ಡೌನ್ನಿಂದ ದೊಡ್ಡ ವಿನಾಯತಿ ಸಿಕ್ಕಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅಬಕಾರಿ ಸುಂಕ ಹೆಚ್ಚಳ ಮಾಡಿ ಆರ್ಥಿಕತೆಗೆ ಆದಾಯ ತುಂಬಿಸುವ ಕೆಲಸ ಮಾಡಿಕೊಂಡಿತ್ತು. ಮಾರ್ಚ್ನಲ್ಲಿ ಪೆಟ್ರೋಲ್ಗೆ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಲೀಟರ್ಗೆ 18 ರೂ. ಮತ್ತು ಡೀಸೆಲ್ಗೆ 12 ರೂ. ಹೆಚ್ಚಿಸಲು ಕೇಂದ್ರವು ಸಂಸತ್ತಿನ ಅನುಮೋದನೆ ಪಡೆದಿತ್ತು.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಡ್ಯೂಟಿಯನ್ನು ಕೇಂದ್ರ, ಕ್ರಮವಾಗಿ ಪ್ರತಿ ಲೀಟರ್ ಮೇಲೆ 10 ರೂ. ಮತ್ತು 13 ರೂ.ಯಂತೆ ಹೆಚ್ಚಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಎರಡು ದಶಕಗಳ ಹಿಂದಿನ ಮಟ್ಟಕ್ಕೆ ಕುಸಿದಿರುವುದರ ಪ್ರಯೋಜನ ಪಡೆಯಲು ಸರ್ಕಾರ ಈ ತೀರ್ಮಾನ ತೆಗೆದುಕೊಂಡಿದೆ.
ಮಾರ್ಚ್ ತಿಂಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತಲಾ 3 ರೂ. ಅಬಕಾರಿ ಸುಂಕ ಹೆಚ್ಚಳದಿಂದ ಸರ್ಕಾರದ ಖಜಾನೆಗೆ 39,000 ಕೋಟಿ ರೂ.ಯಷ್ಟು ಆದಾಯ ಹರಿದು ಬಂತು. ಈಗ ತೆಗೆದುಕೊಂಡ ಮತ್ತೊಂದು ಸುತ್ತಿನ ಸುಂಕ ಏರಿಕೆಯಿಂದ ವಾರ್ಷಿಕ ವರಮಾನ 2 ಲಕ್ಷ ಕೋಟಿ ರೂ. ದಾಟಲಿದೆ.