ನವದೆಹಲಿ: ಹೊಸ ಈರುಳ್ಳಿ ಆಗಮನದ ಬಳಿಕ ದೇಶಿಯ ಮಾರುಕಟ್ಟೆಯಲ್ಲಿ ಬೆಲೆಯು ನಿಯಂತ್ರಣಕ್ಕೆ ಬಂದಿದ್ದು, ಈರುಳ್ಳಿ ರಫ್ತು ಮೇಲಿನ ನಿಷೇಧವನ್ನು ತೆಗೆದುಹಾಕಲು ಸರ್ಕಾರ ಚಿಂತಿಸುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಾಜಾ ಈರುಳ್ಳಿಯ ಆಗಮನವು ಬೆಲೆಗಳನ್ನು ಇನ್ನಷ್ಟು ಕಡಿಮೆ ಆಗುವಂತೆ ಮಾಡುತ್ತಿದೆ. ಆದ್ದರಿಂದ ರಫ್ತು ನಿಷೇಧವನ್ನು ತೆಗೆದುಹಾಕುವ ಅವಶ್ಯಕತೆಯಿದೆ ಎಂದು ಅಧಿಕಾರಿ ಹೇಳಿದರು.
ಕಳೆದ ತಿಂಗಳು ಪ್ರತಿ ಕೆ.ಜಿ. ಈರುಳ್ಳಿಯು 160 ರೂ.ಗಳಷ್ಟು ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿ ಕೇಂದ್ರ ಮತ್ತು ಕೆಲ ರಾಜ್ಯ ಸರ್ಕಾರಗಳಿಗೆ ತಲೆನೋವಾಗಿತ್ತು. ಈರುಳ್ಳಿ ದಾಸ್ತಾನು ಮೇಲೆ ನಿಬಂಧನೆ ಹೇರಿ ವಿದೇಶಗಳಿಗೆ ರಫ್ತು ಮಾಡದಂತೆ ಕೇಂದ್ರ ಸರ್ಕಾರವು 2019ರ ಸೆಪ್ಟೆಂಬರ್ ತಿಂಗಳಲ್ಲಿ ನಿಷೇಧ ವಿಧಿಸಿತ್ತು.
ಹೊರ ರಾಷ್ಟ್ರಗಳಿಂದ ಸಾವಿರಾರು ಕ್ವಿಂಟಲ್ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಯಿತು. ಈಗ ಈರುಳ್ಳಿ ಬೆಲೆಯು ಪ್ರತಿ ಕೆ.ಜಿ.ಗೆ 60-70 ರೂ. ಆಸುಪಾಸಿನಲ್ಲಿದೆ. ತಾಜಾ ಈರುಳ್ಳಿಯು ಜನವರಿಯಿಂದ ಮೇ ವರೆಗೆ ಲಭ್ಯವಾಗಲಿದ್ದು, ಬೆಲೆಯು ನಿಯಂತ್ರಣದಲ್ಲಿ ಇರಲಿದೆ. ಹೀಗಾಗಿ, ಈ ಹಿಂದಿನ ನಿಬಂಧನೆಗಳು ಸಡಿಲಗೊಳ್ಳಲಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.