ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಮಂಡಿಸಿದ ತಮ್ಮ ಚೊಚ್ಚಲ ಬಜೆಟ್ನಲ್ಲಿ ಇಂಧನ ಮೇಲೆ ಎಕ್ಸಿಸ್ ಸುಂಕ ಹಾಗೂ ಸೆಸ್ ದರ ಏರಿಸುವ ಘೋಷಣೆ ಹೊರಬಿದ್ದ ಮರುದಿನವೇ ಎಲ್ಲ ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ.
ಬಜೆಟ್ ಭಾಷಣದಲ್ಲಿ ಸೀತಾರಾಮನ್ ಅವರು, ರಸ್ತೆ ಮತ್ತು ಮೂಲಭೂತ ಸೌಕರ್ಯಗಳ ಅನುದಾನ ಸಂಗ್ರಹಿಸಲು ತೈಲದ ಮೇಲೆ ಹೆಚ್ಚುವರಿ ಸುಂಕ ಹಾಗೂ ಸೆಸ್ ದರ ₹ 2ಯಷ್ಟು ಹೆಚ್ಚಿಸಲಾಗಿದೆ. ಈ ಮೂಲಕ ₹ 28 ಸಾವಿರ ಕೋಟಿ ಹಣ ಸಂಗ್ರಹಿಸುವ ಗುರಿ ಇರಿಸಿಕೊಳ್ಳಲಾಗಿದೆ ಎಂದರು.
ಸೆಸ್ ದರ ಜಿಗಿತದ ಘೋಷಣೆ ಹೊರಬೀಳುತ್ತಿದ್ದಂತೆ ಎಲ್ಲ ಮೆಟ್ರೋ ನಗರಗಳಲ್ಲಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ ₹ 2.5 ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀ. ಪೆಟ್ರೋಲ್ ₹ 78.57ರಲ್ಲಿ ಹಾಗೂ ಡೀಸೆಲ್ ₹ 69.9ರಲ್ಲಿ ಲಭ್ಯವಾಗುತ್ತಿದೆ. ನಿನ್ನ ಉಭಯ ತೈಲಗಳು ಕ್ರಮವಾಗಿ ₹ 76.15 ಮತ್ತು ₹ 67.4ರಲ್ಲಿ ಮಾರಾಟ ಆಗುತ್ತಿತ್ತು.
ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಲೀ. ಪೆಟ್ರೋಲ್ ಮತ್ತು ಡೀಸೆಲ್ ಕ್ರಮವಾಗಿ ₹ 75.37 ಹಾಗೂ ₹ 68.88 ಮಟ್ಟದಲ್ಲಿ ಮಾರಾಟ ಆಗುತ್ತಿವೆ. ಪೆಟ್ರೋಲ್ನಲ್ಲಿ ₹ 2.54 ಹಾಗೂ ಡೀಸೆಲ್ನಲ್ಲಿ ₹ 2.54 ಹೆಚ್ಚಳವಾಗಿದೆ.