ಹೊಸದಿಲ್ಲಿ: 2020-21 ರ ಹಣಕಾಸು ವರ್ಷದಲ್ಲಿ ಭಾರತದ ನಿರೀಕ್ಷಿತ ಆರ್ಥಿಕ ಬೆಳವಣಿಗೆ (ಜಿಡಿಪಿ) ದರ ಕುಸಿತ ಕಾಣಲಿದೆ ಎಂದು ಅಂತರರಾಷ್ಟ್ರೀಯ ರೇಟಿಂಗ್ ಸಂಸ್ಥೆ ಫಿಚ್ ಅಂದಾಜಿಸಿದೆ. ಭಾರತದ ನಿರೀಕ್ಷಿತ ಜಿಡಿಪಿ ದರ ಶೇ 5.1 ರಷ್ಟಿರಲಿದ್ದು, ಕೊರೊನಾ ವೈರಸ್ ಕಾರಣದಿಂದ ದೇಶದಲ್ಲಿ ಬಂಡವಾಳ ಹೂಡಿಕೆ ಮತ್ತು ರಫ್ತು ಪ್ರಮಾಣ ಕುಸಿತದಿಂದ ಬೆಳವಣಿಗೆ ದರ ಕುಸಿಯಲಿದೆ ಎಂದು ಫಿಚ್ ಹೇಳಿದೆ.
2020-21 ರ ಹಣಕಾಸು ವರ್ಷದಲ್ಲಿ ಶೇ. 5.6 ಹಾಗೂ ಅದರ ಮರುವರ್ಷ ಶೇ. 6.5 ರಷ್ಟು ಆರ್ಥಿಕ ಬೆಳವಣಿಗೆ ದರ ಇರಲಿದೆ ಇದೇ ಫಿಚ್ ಸಂಸ್ಥೆ ಡಿಸೆಂಬರ್ 2019 ರಲ್ಲಿ ಅಂದಾಜಿಸಿತ್ತು. ಆದರೆ ಈಗ ಶೇ. 5.6 ರ ಬದಲಾಗಿ ಬೆಳವಣಿಗೆ ದರ ಶೇ. 5.1 ರಷ್ಟು ಇರಲಿದೆ ಎಂದು ತಿಳಿಸಿದೆ.
ಬರುವ ವಾರಗಳಲ್ಲಿ ವಿಶ್ವಾದ್ಯಂತ ಮತ್ತಷ್ಟು ಜನ ಕೊರೊನಾ ವೈರಸ್ನಿಂದ ಪ್ರಭಾವಿತರಾಗಲಿದ್ದಾರೆ. ಆದರೂ ವೈರಸ್ ಸೋಂಕು ನಿಯಂತ್ರಣದಲ್ಲಿರಲಿದೆ ಎಂದು ತಾನು ತಯಾರಿಸಿದ ವಿಶ್ವ ಆರ್ಥಿಕ ಮುನ್ನೋಟ-2020ರ ವರದಿಯಲ್ಲಿ ಫಿಚ್ ಹೇಳಿದೆ.
'ಸರಕು ಸಾಗಣೆ ಪೂರೈಕೆಯಲ್ಲಿನ ವ್ಯತ್ಯಯದಿಂದ ಬಂಡವಾಳ ಹೂಡಿಕೆ ಮತ್ತು ರಫ್ತುಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ. 2019-2020 ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ. 5 ರಷ್ಟಿತ್ತು. ಪ್ರಸ್ತುತ 2020-21 ಹಣಕಾಸು ವರ್ಷದಲ್ಲಿ ಶೇ. 5.1 ರಷ್ಟು ಸ್ಥಿರವಾದ ಜಿಡಿಪಿ ಬೆಳವಣಿಗೆ ಇರಲಿದೆ' ಎಂದು ಫಿಚ್ ತಿಳಿಸಿದೆ.