ನವದೆಹಲಿ: ಹೆಚ್ಚುತ್ತಿರುವ ಬೆಲೆ ಮತ್ತು ಕಡಿಮೆ ಪೂರೈಕೆಯನ್ನು ಉಲ್ಲೇಖಿಸಿದ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ, ಕಡ್ಡಾಯವಾಗಿ ಚಿನ್ನದ ಹಾಲ್‌ಮಾರ್ಕಿಂಗ್ ನಿಯಮವನ್ನು ಇನ್ನೂ ಎರಡು ವರ್ಷ ವಿಸ್ತರಿಸುವಂತೆ ಕೇಂದ್ರವನ್ನು ಒತ್ತಾಯಿಸಿದೆ.
ಗುರುವಾರದ ವಹಿವಾಟಿನಂದು ಚಿನ್ನದ ಬೆಲೆ 10 ಗ್ರಾಂ.ಗೆ 51,500 ರೂ. ದಾಟಿದೆ. ಬೆಳ್ಳಿ ಕೂಡ ಪ್ರತಿ ಕೆ.ಜಿ.ಯ ಮೇಲೆ 62,000 ರೂ.ಯಲ್ಲಿ ವಹಿವಾಟು ನಡೆಸಿದೆ. ಕೋವಿಡ್-19 ಪ್ರೇರಿತ ಆರ್ಥಿಕ ಪ್ರಕ್ಷುಬ್ಧತೆಯ ಪರಿಣಾಮವಾಗಿ ಹೂಡಿಕೆದಾರರ ಸುರಕ್ಷಿತ ತಾಣವಾದ ಬಂಗಾರ ವ್ಯಾಪಕ ಬೇಡಿಕೆ ಪಡೆದುಕೊಂಡಿದೆ ಎಂದು ಸಿಎಐಟಿ ಹೇಳಿದೆ.
ಆಗಸ್ಟ್ 3ರಂದು ರಕ್ಷಾ ಬಂಧನದಿಂದ ಆರಂಭವಾಗುವ ಹಬ್ಬದ ಋತುವಿನಲ್ಲಿ ಚಿನ್ನ ಮತ್ತು ಬೆಳ್ಳಿಯಲ್ಲಿ ನಿರಂತರ ಬೇಡಿಕೆಯನ್ನು ಒಕ್ಕೂಟವು ನಿರೀಕ್ಷಿಸುತ್ತದೆ. ದೀಪಾವಳಿಯಂದು ಚಿನ್ನದ ಬೆಲೆ 10 ಗ್ರಾಂ.ಗೆ 55,000 ರೂ. ದಾಟುವ ಸಾಧ್ಯತೆ ಇದೆ ಎಂದು ಅಂದಾಜಿಸಿದೆ.
ಸಿಎಐಟಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್, ಅಖಿಲ ಭಾರತ ಜ್ಯುವೆಲ್ಲರ್ಸ್ ಮತ್ತು ಗೋಲ್ಡ್ಸ್ಮಿತ್ ಫೆಡರೇಷನ್‌ನ ಕನ್ವೀನರ್ ಪಂಕಜ್ ಅರೋರಾ ಪ್ರಕಾರ, ಬೆಳ್ಳಿಯು ಪ್ರತಿ ಕಿಲೋಗ್ರಾಂ ಬೆಲೆಯು 72,000 ರೂ.ನಿಂದ 75,000 ರೂ.ಗಳವರೆಗೆ ಇರಲಿದೆ ಎಂದಿದ್ದಾರೆ.
ಲಾಕ್‌ಡೌನ್‌ಗೂ ಮುನ್ನ 10 ಗ್ರಾಂ. ಚಿನ್ನದ ಬೆಲೆ 41,000 ರೂ. ಮತ್ತು ಬೆಳ್ಳಿಯ ಬೆಲೆ ಪ್ರತಿ ಕೆ.ಜಿ.ಗೆ 40,000 ರೂ.ಗಳಷ್ಟಿತ್ತು. ಕೇವಲ 4 ತಿಂಗಳ ಅವಧಿಯಲ್ಲಿ ಚಿನ್ನದ ದರದಲ್ಲಿ ಶೇ 28-30ರಷ್ಟು ಹೆಚ್ಚಳವಾಗಿದೆ. ಬೆಳ್ಳಿಯ ದರದಲ್ಲಿ ಸುಮಾರು 45 ಪ್ರತಿಶತದಷ್ಟು ಏರಿಕೆಯಾಗಿದೆ ಎಂದರು.
ಆಭರಣಕಾರರು ತಮ್ಮ ಹಳೆಯ ಷೇರುಗಳನ್ನು ಮಾರಾಟ ಮಾಡಲು ಹಾಗೂ ಕೋವಿಡ್ ಪ್ರೇರಿತ ಸಂಕಷ್ಟದ ದೃಷ್ಟಿಯಿಂದ ಕೇಂದ್ರವು ಹಾಲ್‌ಮಾರ್ಕಿಂಗ್ ಕಡ್ಡಾಯ ನಿಯಮವನ್ನು ಇನ್ನೂ 2 ವರ್ಷ ವಿಸ್ತರಿಸಬೇಕು ಎಂದು ಒಕ್ಕೂಟ ಮನವಿ ಮಾಡಿದೆ.
ಅಮೂಲ್ಯವಾದ ಲೋಹದ ಶುದ್ಧತೆ ಖಚಿತಪಡಿಸಿಕೊಳ್ಳಲು 2021ರ ಜನವರಿ 15ರಿಂದ ದೇಶಾದ್ಯಂತ ಚಿನ್ನಾಭರಣಗಳು ಮತ್ತು ಕಲಾಕೃತಿಗಳಿಗೆ ಹಾಲ್‌ಮಾರ್ಕಿಂಗ್ ಕಡ್ಡಾಯಗೊಳಿಸಲಾಗುವುದು ಎಂದು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು 2019ರ ನವೆಂಬರ್ನಲ್ಲಿ ಹೇಳಿದ್ದರು.