ನವದೆಹಲಿ: ಪರಿಸರ ಸ್ನೇಹಿ ಹಾಗೂ ಶೇ.30 ರಷ್ಟು ಕಡಿಮೆ ಪ್ರಮಾಣದ ಹೊಗೆಯನ್ನು ಹೊರ ಸೂಸುವ ಹಸಿರು ಪಟಾಕಿಗಳು (ಗ್ರೀನ್ ಕ್ರ್ಯಾಕರ್ಸ್) ಮಾರುಕಟ್ಟೆಗೆ ಪ್ರವೇಶಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದರು.
ಪರಿಸರಕ್ಕೆ ಹಾನಿಯಾಗದಂತೆ ಮತ್ತು ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಮಾಲಿನ್ಯದ ಭೀತಿಯನ್ನು ದೂರ ಮಾಡಲು ಹೊಸ ಮತ್ತು ಸುಧಾರಿತ ಪಟಾಕಿಗಳನ್ನು ಪರಿಚಯಿಸಲಾಗಿದೆ ಎಂದರು.
ಕನಿಷ್ಟ 30 ಪ್ರತಿಶತದಷ್ಟು ಕಡಿಮೆ ಹೊಗೆ ಸೂಸುವ ಹಸಿರು ಪಟಾಕಿಗಳನ್ನು ಪರಿಚಯಿಸುತ್ತಿದ್ದೇವೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಇವು ಪರಿಸರ ಸ್ನೇಹಿ. ಮಾಲಿನ್ಯಕಾರಕ ಪಟಾಕಿಗಳಿಗೆ ಪರ್ಯಾಯವಾಗಿ ಬರಬೇಕೆಂದು ನಮ್ಮ ವಿಜ್ಞಾನಿಗಳಿಗೆ ಮನವಿ ಮಾಡಿದ್ದೆವು. ಜನರ ಮನೋಭಾವನೆಗಳಿಗೆ ಹಾಗೂ ಪರಿಸರಕ್ಕೆ ಧಕ್ಕೆ ಆಗದಂತಹ ಪಟಾಕಿಗಳನ್ನು ತಯಾರಿಸಿದ್ದಾರೆ ಎಂದು ಆರೋಗ್ಯ ಸಚಿವರು ಹೇಳಿದರು.
ಈ ಹಸಿರು ಕ್ರ್ಯಾಕರ್ಸ್ಗಳನ್ನು ಕೌನ್ಸಿಲ್ ಫಾರ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್‌ಐಆರ್) ತಜ್ಞರು ಸಂಶೋಧಿಸಿದ್ದಾರೆ. ಮಾಲಿನ್ಯ ಕಡಿಮೆ ಮಾಡಿ ಧೂಳನ್ನು ಹೀರಿಕೊಳ್ಳುವ, ಹೊಗೆ ಬಿಡದ ಪಟಾಕಿ ತಯಾರಿಸುವ ಫಾರ್ಮುಲಾ ಬಳಸಿದ್ದಾರೆ. ಸುಪ್ರೀಂಕೋರ್ಟ್ ಮಾನದಂಡಗಳ ಅನ್ವಯ ಇವುಗಳನ್ನು ತಯಾರಿಸಲಾಗಿದೆ.