ನವದೆಹಲಿ: ಕೊರೊನಾ ವೈರಸ್ ಬಿಕ್ಕಟ್ಟಿನಿಂದ ಉಂಟಾದ ಆರ್ಥಿಕ ಪ್ರಕ್ಷುಬ್ಧತೆಯಿಂದಾಗಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಜೂನ್‌ನಲ್ಲಿ ದೇಶಿಯ ಪ್ರಯಾಣಿಕ ವಾಹನ ಮಾರಾಟ ಅರ್ಧದಷ್ಟು ಕಡಿಮೆಯಾಗಿದೆ.
ದೇಶದಲ್ಲಿ 2020ರ ಜೂನ್‌ನಲ್ಲಿ 1,05,617 ಪ್ರಯಾಣಿಕರ ವಾಹನಗಳು ಮಾರಾಟವಾಗಿವೆ. 2019ರಲ್ಲಿ ಇದೇ ಅವಧಿಯಲ್ಲಿ ಮಾರಾಟವಾದ 2,09,522 ಯುನಿಟ್‌ಗಳಿಗಿಂತ ಶೇ. 49.59ರಷ್ಟು ಕಡಿಮೆಯಾಗಿವೆ.
ಉದ್ಯಮ ಸಂಸ್ಥೆ ಭಾರತೀಯ ಅಟೊಮೊಬೈಲ್ ತಯಾರಿಕಾ ಒಕ್ಕೂಟ(ಸಿಯಾಮ್) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಕಳೆದ ವರ್ಷ ಜೂನ್‌ನಲ್ಲಿ 1,32,077 ಯುನಿಟ್‌ಗಳಿಗೆ ಹೋಲಿಸಿದ್ರೆ ದೇಶದಲ್ಲಿ ಕಾರುಗಳ ಮಾರಾಟವು ಕಳೆದ ತಿಂಗಳು ಶೇ 57.98ರಷ್ಟು ಕುಸಿದು 55,497ಕ್ಕೆ ತಲುಪಿದೆ ಎಂದಿದೆ.
ಟಾಟಾ ಮೋಟಾರ್ಸ್‌ನಂತಹ ಕೆಲವು ಪ್ರಮುಖ ಮಾರಾಟ ಸಂಸ್ಥೆಗಳ ಅಂಕಿಅಂಶಗಳ ದತ್ತಾಂಶ ಒಳಗೊಂಡಿಲ್ಲ ಎಂದು ಸಿಯಾಮ್ ಹೇಳಿದೆ. ತ್ರಿಚಕ್ರ ವಾಹನಗಳ ಮಾರಾಟವು 10,300 ಯುನಿಟ್‌ಗಳಾಗಿದ್ದು, ವರ್ಷದಿಂದ ವರ್ಷಕ್ಕೆ 80.15ರಷ್ಟು ಕಡಿಮೆಯಾಗಿದೆ. ಸ್ಕೂಟರ್, ಮೋಟರ್ ಸೈಕಲ್ ಮತ್ತು ಮೊಪೆಡ್ ಒಳಗೊಂಡ ದ್ವಿಚಕ್ರ ವಾಹನಗಳ ಮಾರಾಟವು ಶೇ 38.56ರಷ್ಟು ಇಳಿಕೆಯಾಗಿ 1,013,431 ಯುನಿಟ್‌ಗಳಿಗೆ ತಲುಪಿದೆ.