ನವದೆಹಲಿ: ಕೋವಿಡ್-19 ಸೋಂಕಿನ ಪರಿಣಾಮ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ, ಡೀಸೆಲ್, ಜೆಟ್ ತೈಲ ಹಾಗೂ ಹಡಗುಗಳ ತೈಲದ ಬೇಡಿಕೆ ಶೇ 10ರಷ್ಟು ಕುಸಿದಿದೆ.
ಕಚ್ಚಾ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ತೀವ್ರ ಕುಸಿತದೊಂದಿಗೆ ಜಾಗತಿಕ ತೈಲ ಮಾರುಕಟ್ಟೆ ಭಾರತೀಯ ಗ್ರಾಹಕರಿಗೆ ಅನುಕೂಲಕರವಾಗಿದ್ದರೂ ಮಾರ್ಚ್ ಮೊದಲ ಎರಡು ವಾರಗಳಲ್ಲಿ ಬೇಡಿಕೆ ಮಾತ್ರ ಕ್ಷೀಣಿಸಿದೆ.
ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳ ಮೂಲಗಳ ಪ್ರಕಾರ, ಜಾಗತಿಕ ತೈಲ ಮಾರುಕಟ್ಟೆಗಳು ಉತ್ಪನ್ನದ ಬೆಲೆಯನ್ನು ಕಡಿಮೆಗೊಳಿಸಿದರೂ ಕೋವಿಡ್ -19 ವೈರಸ್ ಹಬ್ಬುವಿಕೆಯಿಂದ ಪ್ರಯಾಣದ ಮೇಲಿನ ನಿರ್ಬಂಧ ವಿಧಿಸಲಾಗಿದೆ. ಮಾರ್ಚ್ 1 ಮತ್ತು 15ರ ನಡುವೆ ಪೆಟ್ರೋಲ್ ಮತ್ತು ಡೀಸೆಲ್ ಪಂಪ್ ಮಾರಾಟವು ಶೇ 11ರಷ್ಟು ಕುಸಿದಿದೆ.
ವಿಮಾನಯಾನ ಸಂಸ್ಥೆಗಳು ದೇಶದ ನಾನಾ ಭಾಗದ ನಿಲ್ದಾಣಗಳಲ್ಲಿ ಕೂಲಂಕಷ ತಪಾಸಣೆ ಹಾಗೂ ಅನುಮಾನಾಸ್ಪದ ಪ್ರಯಾಣಿಕರ ಪರೀಕ್ಷೆ ಮತ್ತು ಕೆಲವು ಮಾರ್ಗಗಳಲ್ಲಿ ಸೇವೆಯ ಸ್ಥಗಿತದಿಂದ ಎಟಿಎಫ್ ಮಾರಾಟ ಕೂಡ ಇಳಿಕೆಯಾಗಿದೆ. ಕೋವಿಡ್ -19 ಸಂಬಂಧಿತ ನಿರ್ಬಂಧದಿಂದ ಅನೇಕ ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಬಂಕರ್ ಇಂಧನದ ಮಾರಾಟದ ಮೇಲೆ ಪರಿಣಾಮ ಬೀರಿವೆ. ಬಹುತೇಕ ಹಡಗುಗಳು ಬಂದರನಲ್ಲಿ ಲಂಗರು ಹಾಕಿವೆ.