ಬೀಜಿಂಗ್/ಲಂಡನ್/ ಮುಂಬೈ: ಜಗತ್ತನ್ನೇ ಬೆಚ್ಚಿ ಬೀಳಿಸಿದ ಮಾರಣಾಂತಿಕ ಕರೋನಾ ವೈರಸ್ ಪರಿಣಾಮದಿಂದಾಗಿ ವಿಶ್ವದ ಷೇರುಮಾರುಕಟ್ಟೆಗಳು ರೆಡ್ ಸೂಚ್ಯಂಕದಲ್ಲಿದ್ದು, ಚೀನಾದ ಪೇಟೆ ಕಳೆದ 8 ತಿಂಗಳಲ್ಲಿ ಗರಿಷ್ಠ ಮಟಕ್ಕೆ ಕುಸಿತ ಕಂಡಿದೆ.
ಚೀನಾದಾದ್ಯಂತ ಮಾರಕ ವೈರಾಣು ಹಬ್ಬುತ್ತಿದ್ದು, ಈಗಾಗಲೇ ಸುಮಾರು 9 ಜನರು ಮೃತಪಟ್ಟು ಸುಮಾರು 800 ಜನರಲ್ಲಿ ಸೋಂಕು ಇರುವಿಕೆ ಪತ್ತೆಯಾಗಿದೆ.
ಲಕ್ಷಾಂತರ ಚೀನಿಯರು ಲ್ಯೂನರ್ ಹೊಸ ವರ್ಷದ ಪ್ರಯುಕ್ಷತ ಪ್ರೇಕ್ಷಣಿಯ ಸ್ಥಳಗಳಿಗೆ ಪ್ರವಾಸ ಹೊರಡಲು ಅಣಿಯಾಗುತ್ತಿರುವ ಹೊತ್ತಲ್ಲೇ ಈ ರೋಗ ಉಲ್ಬಣಗೊಂಡಿದೆ. ಸೋಂಕು ಹರಡುವ ಭೀತಿಯಿಂದಾಗಿ ಈಗಾಗಲೇ ಪ್ರವಾಸವನ್ನು ಮೊಟಕುಗೊಳಿಸುತ್ತಿದ್ದಾರೆ. ಟ್ರಾವಲ್ ಏಜೆನ್ಸಿಗಳು ಇದಕ್ಕೆ ಹೆಚ್ಚಿನ ಉತ್ಸಾಹ ತೊರುತ್ತಿಲ್ಲ. ತತ್ಪರಿಣಾಮ ಮಾರುಕಟ್ಟೆಗಳು ಋಣಾತ್ಮಕತೆ ಹಾದಿ ಹಿಡಿದಿವೆ. ಎಲ್ಲ ರಾಷ್ಟ್ರಗಳು ಸೋಂಕು ಹರಡದಂತೆ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಿವೆ. ಕೆಲವು ಕಡೆ ಪ್ರವಾಸ ನಿರ್ಬಂಧ ಸಹ ವಿಧಿಸಲಾಗಿದೆ.
ಜಪಾನ್‌ನ ಯೆನ್ ಮತ್ತು ಸರ್ಕಾರಿ ಬಾಂಡ್‌ಗಳಂತಹ ಸುರಕ್ಷಿತ ಆಯ್ಕೆಯ ಷೇರುಗಳು ಏರಿಕೆಯಾಗಿದೆ. ಆದರೆ, ಏಷ್ಯಾದಲ್ಲಿ ಕುಸಿತಗೊಳ್ಳುತ್ತಿರುವ ಷೇರುಪೇಟೆಗಳ ನಡೆಯನ್ನು ಯುರೋಪಿಯನ್ ಪೇಟೆಗಳ ಷೇರುಗಳು ಅನುಸರಿಸಿವೆ. ವಿಮಾನಯಾನ ಪ್ರಯಾಣಕರ ದಟ್ಟಣೆ ಕುಸಿತ ಹಾಗೂ ತೈಲ ಪೂರೈಕೆಯ ಹೆಚ್ಚಳವು ಕಚ್ಚಾ ತೈಲ ದರವು ಏಳು ವಾರಗಳ ಕನಿಷ್ಠ ಮಟ್ಟಕ್ಕೆ ತಲುಪಿದೆ.
ಕರೋನಾ ವೈರಸ್ ತನ್ನ ಕಬಂಧಬಾಹುಗಳನ್ನು ಜಾಗತಿಕ ಮಾರುಕಟ್ಟೆಗಳ ಮೇಲೆ ನಿಧಾನವಾಗಿ ಚಾಚಿಕೊಳ್ಳುತ್ತಿದೆ. ಇದು ಕೆಲವು ದಿನ ಅಥವಾ ತಿಂಗಳುಗಳವರೆಗೆ ಇರಲಿದೆ. ಇಂತಹ ಪರಿಸ್ಥಿತಿ ಇದ್ದಾಗ ಸ್ವಾಭಾವಿಕವಾಗಿ ಕರೆನ್ಸಿಯ ಮೌಲ್ಯ ಇಳಿಕೆಯಾಗುತ್ತದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವೈರಸ್ ಹರಡುತ್ತಿರುವಂತೆ ಎಂಎಸ್ಸಿಐನ ಜಪಾನ್ ಹೊರಗಿನ ಏಷ್ಯಾ-ಪೆಸಿಫಿಕ್ ಷೇರುಗಳ ಸೂಚ್ಯಂಕ ಶೇ 1.07ರಷ್ಟು ಕುಸಿದಿದೆ. ಚೀನಾದ ಷೇರುಗಳು ಶೇ 3.1ರಷ್ಟು ಇಳಿಕೆ ಕಂಡಿವೆ. ಇದು ಮೇ ತಿಂಗಳ ನಂತರದ ಅತಿದೊಡ್ಡ ದೈನಂದಿನ ಕುಸಿತ ಇದಾಗಿದೆ. ಈ ಹಿಂದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾದ ಸರಕುಗಳ ಮೇಲೆ ಹೆಚ್ಚುವರಿ ಸುಂಕದ ನಿರ್ಧಾರವು ಹಣಕಾಸು ಮಾರುಕಟ್ಟೆಗಳನ್ನೇ ನಡುಗಿಸಿತ್ತು. ಈಗ ಕರೋನಾ ಆ ಕೆಲಸ ಮಾಡುತ್ತಿದೆ.
ಹಾಂಕಾಂಗ್ನ ಎಚ್ಎಸ್ಐ ಷೇರು ಶೇ 1.5ರಷ್ಟು ಮತ್ತು ಜಪಾನ್‌ನ ನಿಕ್ಕಿ ಸೂಚ್ಯಂಕ ಶೇ 1ರಷ್ಟು ಕುಸಿತ ಕಂಡಿದೆ. ಮುಂಬೈ ಷೇರು ಸೂಚ್ಯಂಕ ಸಹ ದಿನದ ಆರಂಭದಲ್ಲಿ ಕುಸಿತ ಕಂಡು ಅತ್ಯಂದ ವೇಳೆಗೆ ಚೇತರಿಸಿಕೊಂಡಿದೆ. ಸೆನ್ಸೆಕ್ಸ್ 271 ಅಂಶಗಳ ಏರಿಕೆ ದಾಖಲಿಸಿದೆ. ಚೀನಾದ ಯುವಾನ್ ಕರೆನ್ಸಿ ಮೌಲ್ಯ ಎರಡು ವಾರಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ.