ನವದೆಹಲಿ: ಜಗತ್ತಿನಾದ್ಯಂತ ಕೊರೊನಾ ವೈರಸ್ ಪ್ರಭಾವದಿಂದ ತೈಲ ಉತ್ಪಾದನೆ ಕಡಿಮೆ ಮಾಡಬೇಕು ಎಂಬ ತೈಲ ಉತ್ಪಾದಕರ ಒಪ್ಪಂದವನ್ನು ಧಿಕ್ಕರಿಸಿ ಆಯಿಲ್ ಪ್ರೊಡಕ್ಷನ್ನಲ್ಲಿ ತೊಡಗಿದ್ದರಿಂದ ಕಚ್ಚಾ ತೈಲದಲ್ಲಿ ಭಾರಿ ಪ್ರಮಾಣದ ಇಳಿಕೆ ದಾಖಲಾಗಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರದಲ್ಲಿ ಶೇ 9ರಷ್ಟು ಇಳಿಕೆಯಾಗಿದ್ದು, ಪ್ರತಿ ಬ್ಯಾರೆಲ್ 45.50 ಡಾಲರ್ನಲ್ಲಿ ಮಾರಾಟ ಆಗುತ್ತಿದೆ. ಇದು 2017ರ ಜೂನ್ ಬಳಿಕ ಅತ್ಯಂತ ಕನಿಷ್ಠ ದರವಾಗಿದೆ. ವೆಸ್ಟ್ ಟೆಕ್ಸಸ್ ಇಂಟರ್ಮಿಡಿಯೆಟ್ ಕಚ್ಚಾ ತೈಲವು ಅಮೆರಿಕ ಬೆಂಚ್ಮಾರ್ಕ್ನಲ್ಲಿ 41.11 ಡಾಲರ್ಗೂ ಕಡಿಮೆ ದರದಲ್ಲಿ ಮಾರಾಟ ಆಗಿತ್ತು.
ಬ್ರೆಂಟ್ ಕಚ್ಚಾ ತೈಲವು ಈ ವರ್ಷದಲ್ಲಿ ಒಟ್ಟಾರೆ ಶೇ 30ರಷ್ಟು ಕುಸಿದಂತಾಗಿದೆ. ಕಳೆದ ವರ್ಷದ ಜನವರಿಯಲ್ಲಿ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್ಗೆ 71.75 ಡಾಲರ್ನಷ್ಟಿತ್ತು. ಈ ವರ್ಷದಲ್ಲಿ ಅದು 45.50 ಡಾಲರ್ಗೆ ತಲುಪಿದೆ. ಆಯಿಲ್ ಕಂಪನಿಗಳ ಕನಿಷ್ಠ ಗಳಿಕೆ, ಹಣಕಾಸಿನ ವಹಿವಾಟಿನಲ್ಲಿ ಅಸ್ಥಿರತೆಯೂ ದರ ಇಳಿಕೆಗೆ ಕಾರಣವಾಗಿದೆ.
"ಕೊರೊನಾ ವೈರಸ್ ಬೆದರಿಕೆಯಿಂದಾಗಿ ವಿಶ್ವ ಆರ್ಥಿಕತೆಯು ದೊಡ್ಡ ಹೊಡೆತವನ್ನು ಕಂಡಿದೆ. ಇದು ತೈಲದ ಬೇಡಿಕೆಯ ಕುಸಿತಕ್ಕೂ ಕಾರಣವಾಗಿದೆ. ತೈಲ ಉತ್ಪಾದಿಸುವ ರಾಷ್ಟ್ರಗಳು ಉತ್ಪಾದನೆ ಕಡಿತದ ಬಗ್ಗೆ ಒಪ್ಪಂದ ಮಾಡಿಕೊಳ್ಳಲು ವಿಫಲವಾಗಿವೆ. ಶುಕ್ರವಾರದ ಸಭೆಯಲ್ಲಿ ರಷ್ಯಾವು ಕಡಿತದ ಪ್ರಮಾಣವನ್ನು ಒಪ್ಪಲಿಲ್ಲ. ಇದರ ಪರಿಣಾಮವಾಗಿ ಬೇಡಿಕೆ ಕುಸಿಯಿತು" ಎಂದು ಏಂಜಲ್ ಬ್ರೋಕಿಂಗ್‌ನ ಉಪಾಧ್ಯಕ್ಷ ಅನುಜ್ ಗುಪ್ತಾ ಹೇಳಿದ್ದಾರೆ.
ಶನಿವಾರದಂದು ಭಾರತದ ಚಿಲ್ಲರೆ ತೈಲಮಾರುಕಟ್ಟೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಕ್ರಮವಾಗಿ 12-13 ಪೈಸೆಯಷ್ಟು ಇಳಿಕೆಯಾಗಿದೆ. ದೆಹಲಿಯಲ್ಲಿ ₹ 71.02 & ₹ 63.69, ಕೋಲ್ಕತ್ತಾ ₹ 73.70& ₹ 66.02, ಮುಂಬೈ ₹ 76.71& ₹ 66.69, ಚೆನ್ನೈ ₹ 73.78 & ₹ 67.2 ಹಾಗೂ ಬೆಂಗಳೂರು ₹ 73.45 & ₹ 65.86ರಲ್ಲಿ ಮಾರಾಟ ಆಗುತ್ತಿದೆ.