ನವದೆಹಲಿ: ತೈಲ ಕಂಪನಿಗಳು ಅಡುಗೆ ಅನಿಲ ಮತ್ತು ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಹೆಚ್ಚಿಸುವ ಮೂಲಕ ಮತ್ತೊಮ್ಮೆ ಸಿಲಿಂಡರ್ ಗ್ರಾಹಕರನ್ನು ಬೆಚ್ಚಿಬೀಳುವಂತೆ ಮಾಡಿವೆ.
ತೈಲ ಕಂಪನಿಗಳು ಅಡುಗೆ ಅನಿಲದ ಸಿಲಿಂಡರ್ ಮೇಲೆ 25 ರೂ. ಮತ್ತು ವಾಣಿಜ್ಯ ಸಿಲಿಂಡರ್‌ಗೆ 95 ರೂ.ಗಳಷ್ಟು ಹೆಚ್ಚಿಸಿದ್ದು, ಪರಿಷ್ಕೃತ ಬೆಲೆ ಇಂದಿನಿಂದ ಜಾರಿಗೆ ಬರಲಿವೆ. ಇತ್ತೀಚಿನ ಬೆಲೆ ಏರಿಕೆಯ ನಂತರ, 14.2 ಕೆ.ಜಿ ದೇಶೀಯ ಎಲ್‌ಪಿಜಿ ಸಿಲಿಂಡರ್ ದೆಹಲಿಯಲ್ಲಿ 794 ರೂ. ಇದ್ದದ್ದು 819 ರೂ.ಗೆ ಲಭ್ಯವಾಗುತ್ತಿದೆ.
ಸಿಲಿಂಡರ್‌ನ ಬೆಲೆಯನ್ನು ದೇಶದ ಇತರ ಭಾಗಗಳಲ್ಲಿ ಇದೇ ದರದಲ್ಲಿ ಹೆಚ್ಚಿಸಲಾಗಿದೆ. ಕೋಲ್ಕತ್ತಾದಲ್ಲಿ ಈಗ 845 ರೂ.ಗೆ ಮಾರಾಟವಾಗುತ್ತಿದೆ, ಮೆಟ್ರೋ ನಗರಗಳ ಪೈಕಿ ಅತಿ ಹೆಚ್ಚಿನ ದರವಾಗಿದೆ. ಮುಂಬೈಯಲ್ಲಿ 835 ರೂ. ಹಾಗೂ ಚೆನ್ನೈನಲ್ಲಿ 835 ರೂ.ಗೆ ಲಭ್ಯವಾಗುತ್ತಿದೆ.
ಮೂರು ತಿಂಗಳ ಅವಧಿಯಲ್ಲಿ 225 ರೂ.ಯಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಡಿಸೆಂಬರ್ 1ರಂದು ಸಿಲಿಂಡರ್ ಬೆಲೆ 594 ರೂ.ಗಳಿಂದ 644 ರೂ.ಗೆ ಹೆಚ್ಚಿಸಲಾಗಿತ್ತು. ಆ ನಂತರ ಜನವರಿ 1ರಂದು 644 ರೂ ಗಳಿಂದ 694 ರೂ.ಗೆ ಹಾಗೂ ಫೆಬ್ರವರಿ 4ರಂದು 719 ರೂ.ಗೆ ಏರಿತು. ಫೆಬ್ರವರಿ 15ರಂದು ಮತ್ತೊಮ್ಮೆ 50 ರೂ. ಹೆಚ್ಚಿಸಿದ್ದರಿಂದ 769 ರೂ.ಗೆ ತಲುಪಿದೆ. ಇತ್ತೀಚಿನ ಹೆಚ್ಚಳದೊಂದಿಗೆ ಕಳೆದ ಐದು ದಿನಗಳಲ್ಲಿ ಎರಡು ಬಾರಿ ಸಿಲಿಂಡರ್ ಹೆಚ್ಚಳವಾಗಿದೆ. 25 ರೂ. ಏರಿಕೆಯೊಂದಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಿಲಿಂಡರ್‌ನ ಬೆಲೆ ಈಗ 819 ರೂ.ಗೆ ತಲುಪಿದೆ.
ಇದನ್ನೂ ಓದಿ: ವಾರ್ಷಿಕ ಜಿಎಸ್ಟಿ ರಿಟರ್ನ್ ಸಲ್ಲಿಕೆ ಗಡುವು ವಿಸ್ತರಣೆ : ಕೊನೆ ದಿನಾಂಕ ಯಾವುದು?
ವಾಣಿಜ್ಯ ಸಿಲಿಂಡರ್‌ಗೆ 95 ರೂ.ಗಳ ಹೆಚ್ಚಳದೊಂದಿಗೆ ಪ್ರತಿ ಸಿಲಿಂಡರ್ 1,614 ರೂ.ಗೆ ಏರಿದೆ. ಇಂದಿನಿಂದ ಈ ಹೆಚ್ಚಳ ಜಾರಿಗೆ ಬರಲಿದೆ ಎಂದು ತೈಲ ಕಂಪನಿಗಳು ತಿಳಿಸಿವೆ. ಮತ್ತೊಂದೆಡೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೂ ಹೆಚ್ಚುತ್ತಿದೆ. ಫೆಬ್ರವರಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 16 ದಿನಗಳಿಂದ ಏರಿಕೆಯಾಗಿದೆ.