ಮುಂಬೈ: 'ಕೊರೊನಾ ವೈರಾಣು ಸೋಂಕು'ನಿಂದ ಮೃತಪಟ್ಟವರ ಸಂಖ್ಯೆ ಏರಿಕೆ ಆಗುತ್ತಿದ್ದಂತೆ, ಇತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯಲ್ಲಿ ಗಮನಾರ್ಹ ಇಳಿಕೆಯಾಗಿದೆ.
ಸೋಮವಾರದಂದು ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್ ಮೇಲೆ ಶೇ .2ರಷ್ಟು (₹ 88.24) ಇಳಿಕೆಯಾಗಿದ್ದು, 59.39 ಡಾಲರ್ನಲ್ಲಿ ಮಾರಾಟ ಆಗುತ್ತಿದೆ. '2,744 ಜನರಿಗೆ ಕೊರೊನಾ ವೈರಾಣು ಸೋಂಕು ತಗುಲಿದ್ದು, ಅದರಲ್ಲಿ 461 ಜನರು ತೀವ್ರ ಸೋಂಕಿನಿಂದ ಬಳಲುತ್ತಿದ್ದಾರೆ' ಎಂದು ಚೀನಾದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾದ ಲೂನರ್ ಹೊಸ ವರ್ಷಕ್ಕೆ ಕಾಲಿಡುತ್ತಿರುವ ವೇಳೆಯಲ್ಲಿ ಈ ಮಾರಕ ರೋಗ ಕಾಣಿಸಿಕೊಂಡಿದ್ದು ಏಷ್ಯಾ, ಅಮೆರಿಕ ಮತ್ತು ಐರೋಪ್ಯ ಷೇರುಪೇಟೆಗಳ ಮೇಲೂ ನಕರಾತ್ಮಕ ಪರಿಣಾಮ ಬೀರಿದೆ. ಕೊರೊನಾ ವೈರಸ್ ಜಾಗತಿಕ ಬೆಳವಣಿಗೆಯನ್ನು ಹೊಸಕಿ ಹಾಕಿದ್ದು, ಮಾರುಕಟ್ಟೆಯ ಬೇಡಿಕೆಯನ್ನು ಸಂಕೂಚಿತಗೊಳಿಸಿದೆ.
ಸೋಮವಾರದ ಬೆಳಗ್ಗೆ 10.30ರ ವೇಳೆಗೆ ಪ್ರತಿ ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲವು ಶೇ 2.22ರಷ್ಟು ಇಳಿಕೆಯಾಗಿ 59.39 ಡಾಲರ್ನಲ್ಲಿ ಮಾರಾಟ ಆಗುತ್ತಿತ್ತು. ಡಾಲರ್ ಎದುರು ರೂಪಾಯಿ ಮೌಲ್ಯ 11 ಪೈಸೆಯಷ್ಟು ಏರಿಕೆಯಾಗಿ ₹ 71.44ರಲ್ಲಿ ವಹಿವಾಟು ನಡೆಸುತ್ತಿದೆ.