ಮುಂಬೈ: ಮೂರು ತಿಂಗಳ ಹಿಂದೆ ಚೀನಾ- ಅಮೆರಿಕ ನಡುವಿನ ವಾಣಿಜ್ಯ ಸಮರ ಹಾಗೂ ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನಾ (ಒಪಿಇಸಿ) ರಾಷ್ಟ್ರಗಳ ತೈಲ ಉತ್ಪಾದನೆ ಕಡಿತದ ವೇಳೆಯಲ್ಲಿ ಕಚ್ಚಾ ತೈಲ ದರ ಏರಿಕೆಯು ಪ್ರವರ್ಧಮಾನದಲ್ಲಿತ್ತು. ಹಲವು ಅಂತಾರಾಷ್ಟ್ರೀಯ ಭೌಗೋಳಿಕ ರಾಜಕೀಯ ಹಾಗೂ ಆರ್ಥಿಕ ನೀತಿಗಳ ಬದಲಾವಣೆಯ ಬಳಿಕ ಕುಸಿದಿದ್ದ ಇಂಧನ ದರ, ಈಗ ಮತ್ತೆ ಏರಿಕೆಯತ್ತ ಮುಖಮಾಡಿದೆ.
ಅಂತಾರಾಷ್ಟ್ರೀಯ ಬ್ರೆಂಟ್ ಕಚ್ಚಾ ತೈಲವು ಗುರುವಾರದ ವಹಿವಾಟಿನಂದು ಪ್ರತಿ ಬ್ಯಾರೆಲ್ 67 ಡಾಲರ್ಗೆ ತಲುಪಿದ್ದು, ಶೇ 0.31ರಷ್ಟು ಹೆಚ್ಚಳವಾಗಿದೆ. ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೆಟ್ (ಡಬ್ಲ್ಯೂಟಿಐ) ವಹಿವಾಟಿನಲ್ಲಿ ಶೇ 0.16ರಷ್ಟು ಏರಿಕೆಯಾಗಿ 61.21 ಡಾಲರ್ನಲ್ಲಿ ಮಾರಾಟ ಆಗುತ್ತಿದೆ.
ಈ ತಿಂಗಳ ಆರಂಭದಲ್ಲಿ ಅಮೆರಿಕ ಅಧ್ಯಕ್ಷರು ಡೊನಾಲ್ಡ್ ಟ್ರಂಪ್ ತಮ್ಮ ವ್ಯಾಪಾರ ಒಪ್ಪಂದದ ಮೊದಲ ಹಂತಕ್ಕೆ ಸಹಿ ಹಾಕುವ ಶುಭ ಸುದ್ದಿಯನ್ನು ಹೊರಡಿಸಿದ್ದರು. ಇದು ಚೀನಾ- ಅಮೆರಿಕ ನಡುವಿನ ದೀರ್ಘಕಾಲದ ವ್ಯಾಪಾರ ಯುದ್ಧಕ್ಕೆ ಭಾಗಶಃ ಅಂತ್ಯ ಹಾಡುವ ಸೂಚಕವಾಗಿದೆ. ಭಾರತವು ಶೇ 80ಕ್ಕಿಂತಲೂ ಅಧಿಕ ಪ್ರಮಾಣದ ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಇದು ಭಾರಿ ಆರ್ಥಿಕ ಕುಸಿತ ಮತ್ತು ಚಿಲ್ಲರೆ ಹಣದುಬ್ಬರದ ತೀವ್ರ ಏರಿಕೆಗೆ ಕಾರಣವಾಗಿತ್ತು.
ಭಾರತದ ಮೆಟ್ರೋ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ
ಕಳೆದ ಎರಡು ದಿನಗಳ ಕಾಲ ಸ್ಥಿರವಾಗಿದ್ದ ಚಿಲ್ಲರೆ ಇಂಧನ ದರವು ಗುರುವಾರದಂದು ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಕ್ರಮವಾಗಿ ₹ 74.68 ಮತ್ತು ₹ 67.09 ಮಾರಾಟ ಆಗುತ್ತಿದೆ. ಉಳಿದಂತೆ ಮುಂಬೈ, ಕೋಲ್ಕತ್ತಾ, ಚೆನ್ನೈ ಹಾಗೂ ಬೆಂಗಳೂರಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕ್ರಮವಾಗಿ ₹ 80.34 ಮತ್ತು ₹ 70.39, ₹ 77.34 ₹ ಮತ್ತು ₹ 69.5, ₹ 77.64 ಮತ್ತು ₹ 70.93 ಹಾಗೂ ₹ 77.32 ಮತ್ತು ₹ 67.97ಯಲ್ಲಿ ಖರೀದಿ ಆಗುತ್ತಿದೆ.